ಮೂಡುಬಿದಿರೆ: ಕ್ವಾರಂಟೈನ್ ನಲ್ಲಿ ವ್ಯಕ್ತಿ ಆತ್ಮಹತ್ಯೆ

ಮುಂಬೈಯಿಂದ ಬಂದು ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರು ಎರಡೇ ಗಂಟೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ

ಕೊರೋನಾ ಭೀತಿಯಲ್ಲಿ ಭವಿಷ್ಯದ ಕುಟುಂಬ ನಿರ್ವಹಣೆ ಬಗ್ಗೆ ಆತಂಕಿತರಾಗಿದ್ದು, ಸಹೋದರರ ಬಳಿ ಬೇಸರ ಹೇಳಿಕೊಂಡಿದ್ದರೆನ್ನಲಾಗಿದೆ

ಕರಾವಳಿ ಕರ್ನಾಟಕ ವರದಿ
ಮೂಡುಬಿದಿರೆ : ಮುಂಬೈಯಿಂದ ಬಂದು ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರು ಎರಡೇ ಗಂಟೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಂದಲೆಯಲ್ಲಿ ಬೆಳಕಿನ ಜಾವ ನಡೆದಿದೆ.

ಮೃತರನ್ನು ಕಡಂದಲೆ ನಿವಾಸಿ ದಯಾನಂದ ಪೂಜಾರಿ ಎಂದು ಗುರುತಿಸಲಾಗಿದೆ. ಮೃತರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

ಬುಧವಾರ ರಾತ್ರಿ ದಯಾನಂದ ಇಬ್ಬರು ಸಹೋದರರೊಂದಿಗೆ ಊರಿಗೆ ಬಂದಿದ್ದು, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಮುಂಜಾನೆ ಮೂರು ಗಂಟೆಗೆ ಅವರ ಶವ ಪಕಾಸಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ.

ದಯಾನಂದ ಅವರು ಸಹೋದರರೊಂದಿಗೆ ಮುಂಬೈ ಹೊಟೇಲ್ ಉದ್ಯೋಗಿಯಾಗಿದ್ದು, ಕೊರೋನಾ ಭೀತಿಯಲ್ಲಿ ಭವಿಷ್ಯದ ಕುಟುಂಬ ನಿರ್ವಹಣೆ ಬಗ್ಗೆ ಆತಂಕಿತರಾಗಿದ್ದು, ಸಹೋದರರ ಬಳಿ ಬೇಸರ ಹೇಳಿಕೊಂಡಿದ್ದರೆನ್ನಲಾಗಿದೆ. ಇದೇ ಕಾರಣಕ್ಕೆ ಆತ್ಮಹತ್ಯೆಗೈದಿರಬಹುದು ಎಂದು ಶಂಕಿಸಲಾಗಿದೆ.

ಮೂಡುಬಿದಿರೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

 

Get real time updates directly on you device, subscribe now.