ಬಂಟ್ವಾಳ ಎಪಿಎಂಸಿ ಅಧ್ಯಕ್ಷರಾಗಿ ನೇಮಿರಾಜ ರೈ, ಉಪಾಧ್ಯಕ್ಷರಾಗಿ ವಿಠಲ ಸಾಲ್ಯಾನ್

ಮುಂದಿನ ಇಪ್ಪತ್ತು ತಿಂಗಳ ಅವಧಿಗೆ ಬಿಜೆಪಿ ಬೆಂಬಲಿತ ಅಧ್ಯಕ್ಷ-ಉಪಾಧ್ಯಕ್ಷ  ಅವಿರೋಧವಾಗಿ ಆಯ್ಕೆಯಾಗುವುದರ ಮೂಲಕ ಆಡಳಿತವನ್ನು ಕಾಂಗ್ರೆಸ್ ಕಳೆದುಕೊಂಡಿದೆ.

ಕರಾವಳಿ ಕರ್ನಾಟಕ ವರದಿ
ಬಂಟ್ವಾಳ:  ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಧ್ಯಕ್ಷರಾಗಿ ನೇಮಿರಾಜ ರೈ ಬೋಳಂತೂರು ಮತ್ತು ಉಪಾಧ್ಯಕ್ಷರಾಗಿ ವಿಠಲ ಸಾಲ್ಯಾನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ ಇಪ್ಪತ್ತು ತಿಂಗಳ ಅವಧಿಗೆ ಬಿಜೆಪಿ ಬೆಂಬಲಿತ ಅಧ್ಯಕ್ಷ-ಉಪಾಧ್ಯಕ್ಷ  ಅವಿರೋಧವಾಗಿ ಆಯ್ಕೆಯಾಗುವುದರ ಮೂಲಕ ಆಡಳಿತವನ್ನು ಕಾಂಗ್ರೆಸ್ ಕಳೆದುಕೊಂಡಿದೆ.

ಅಧ್ಯಕ್ಷ ನೇಮಿರಾಜ ರೈ ಅವರು 2013-14ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದು, ಎರಡನೇ ಬಾರಿ ಅಧ್ಯಕ್ಷ ಪದವಿಗೇರಿದ್ದಾರೆ. ಉಪಾಧ್ಯಕ್ಷ ವಿಠಲ ಸಾಲ್ಯಾನ್ ಇದೇ ಮೊದಲ ಬಾರಿ ಎಪಿಎಂಸಿಗೆ ಚುನಾಯಿತರಾದವರು.

ಅಧ್ಯಕ್ಷರಾಗಿ ಆಯ್ಕೆಗೊಂಡ ನೇಮಿರಾಜ ರೈ ಅವರು ಮಾಣಿ ಕ್ಷೇತ್ರದಿಂದ ಹಾಗೂ ಉಪಾಧ್ಯಕ್ಷರಾಗಿ ವಿಠಲ ಸಾಲ್ಯಾನ್ ಅವರು ತುಂಬೆ ಕ್ಷೇತ್ರದಿಂದ ನಿರ್ದೇಶಕರಾಗಿ ಚುನಾಯಿತರಾಗಿದ್ದರು. ಬಿಜೆಪಿ ಏಳು ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ ಆರು ಸದಸ್ಯ ಬಲ ಹೊಂದಿದೆ. ಬಿಜೆಪಿಯಿಂದ ತನಿಯಪ್ಪ ಗೌಡ ಮಾಣಿ, ವಸಂತ ಅಣ್ಣಳಿಕೆ, ರೇಣುಕಾ ವಿಜಯ ರೈ ಮೂವರು ನಾಮ ನಿರ್ದೇಶಿತ ಸದಸ್ಯರು ಆಯ್ಕೆಯಾದ ಪರಿಣಾಮ ಬಿಜೆಪಿ ಅಧಿಕಾರಕ್ಕೇರಿದೆ.

ಬಂಟ್ವಾಳ ಎಪಿಎಂಸಿ ಕಚೇರಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ  ಪ್ರಕ್ರಿಯೆಯನ್ನು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ನಡೆಸಿಕೊಟ್ಟರು. ಎಪಿಎಂಸಿ ಕಾರ್ಯದರ್ಶಿ ಶಮಂತ್ ಕುಮಾರ್ ಆಯ್ಕೆ ಪ್ರಕ್ರಿಯೆ ಸಂದರ್ಭ ಸಹಕರಿಸಿದರು.

 

 

 

Get real time updates directly on you device, subscribe now.