‘60 ದಿನಗಳಿಂದ ಹೋಂ ಕ್ವಾರಂಟೈನ್‌ನಲ್ಲಿದ್ದ ಪ್ರಮೋದ್ ಮಧ್ವರಾಜ್’: ಉಡುಪಿ ಶಾಸಕರ ಲೇವಡಿ

ಉಭಯ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಕ್ವಾರಂಟೈನ್ ಕೇಂದ್ರಗಳಲ್ಲಿರುವ ನಾಗರಿಕರನ್ನು ನಿರ್ಲಕ್ಷ ಮಾಡಿದೆ ಎಂಬ ದೂರುಗಳು ವ್ಯಾಪಕವಾಗಿವೆ.

ಲಾಕ್ಡೌನ್ ಅವಧಿಯಲ್ಲಿ ಪೋಟೋಗೆ ಫೋಸ್ ಕೊಡುವ, ಫೋಟೋಗಳಿಗೆ ಹಾತೊರೆಯುವ ಮನಸ್ಥಿತಿ ನನ್ನದಲ್ಲ ಎಂದು ರಘುಪತಿ ಅವರನ್ನು ಚುಚ್ಚಿದ್ದಾರೆ ಪ್ರಮೋದ್.

ಕರಾವಳಿ ಕರ್ನಾಟಕ ವರದಿ
ಉಡುಪಿ: “ ಕಳೆದ ಸುಮಾರು 60ದಿನಗಳಿಂದ ಹೋಂ ಕ್ವಾರಂಟೈನ್‌ನಲ್ಲಿದ್ದ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ಉಡುಪಿ ಜಿಲ್ಲಾಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ” ಎಂದು ಟ್ವೀಟ್ ಮಾಡುವುದರೊಂದಿಗೆ ಶಾಸಕ ರಘುಪತಿ ಭಟ್ ಅವರು ಲಾಕ್‌ಡೌನ್ ಅವಧಿಯಲ್ಲಿ ಪ್ರಮೋದ್ ಜನರಿಗೆ ಸ್ಪಂದಿಸಿಲ್ಲ ಎಂದು ಲೇವಡಿ ಮಾಡಿದ್ದಾರೆ. ಕ್ವಾರಂಟೈನ್ ಅವಧಿ ಮುಗಿದರೂ ದುಬೈಯಿಂದ ಬಂದು ಕ್ವಾರಂಟೈನ್‌ಗೆ ಒಳಗಾದ ಮಹಿಳೆಗೆ ಮನೆಗೆ ತೆರಳಲು ಬಿಡದ ಉಡುಪಿ ಡಿಸಿ ಬೇಜವಾಬ್ದಾರಿಯ ನಡವಳಿಕೆ ತೋರಿದ್ದು, ಅವರ ವಿರುದ್ಧ ಮುಖ್ಯಮಂತ್ರಿಗಳು ಕ್ರಮ ಜರುಗಿಸಬೇಕು ಎಂದು ಪ್ರಮೋದ್ ಅವರು ಒತ್ತಾಯಿಸಿದ ಬೆನ್ನಲ್ಲೇ ರಘುಪತಿ ಭಟ್ ಅವರು ಡಿಸಿ ಪರ ಬ್ಯಾಟಿಂಗ್‌ಗೆ ಇಳಿದಿದ್ದಾರೆ.

ಜಿಲ್ಲೆಯ ಜನರ ಆರೋಗ್ಯದ ಕಾಳಜಿಯೊಂದಿಗೆ ಹಗಲು ಇರುಳು ಕೆಲಸ ಮಾಡುತ್ತಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ನೇತೃತ್ವದ ತಂಡ ಉತ್ತಮ ಕೆಲಸ ನಡೆಸುತ್ತಿದ್ದು, ನಾವು ಅವರನ್ನು ಅಭಿನಂದಿಸುತ್ತೇವೆ ಎಂದಿರುವ ರಘುಪತಿ, ಪ್ರಮೋದ್ ಅವರು ಎತ್ತಿರುವ ಗರ್ಭಿಣಿಯ ಆರೋಗ್ಯದ ಕುರಿತಾದ ಪ್ರಶ್ನೆಗೆ ಯಾವುದೇ ಉತ್ತರ ನೀಡದೇ ನುಣುಚಿಕೊಂಡಿದ್ದಾರೆ.

ಶಾಸಕ ರಘುಪತಿ ಭಟ್ ಅವರು ಉಡುಪಿ ಜಿಲ್ಲಾಧಿಕಾರಿಗಳ ಬೆಂಬಲಕ್ಕೆ ನಿಂತು ತನ್ನನ್ನು ಲೇವಡಿಗೈಯುತ್ತಿರುವುದು ಪ್ರಮೋದ್ ಮಧ್ವರಾಜ್ ಅವರನ್ನು ಕೆರಳಿಸಿದೆ. ಕಳೆದ ಅರವತ್ತು ದಿನಗಳಲ್ಲಿ ಅಕ್ರಮ ಮರಳುಗಾರಿಕೆಯ ಬಗ್ಗೆ ಹಲವು ದೂರುಗಳಿವೆ. ಅವುಗಳ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ಮತ್ತೆ ಟೀಕಾ ಪ್ರಹಾರಗೈದಿದ್ದಾರೆ.

ನಾನು ಲಾಕ್ಡೌನ್ ಅವಧಿಯಲ್ಲಿ ಜನರಿಗೆ ನನ್ನಿಂದಾದ ಎಲ್ಲ ಸೇವೆಯನ್ನು ದೊಡ್ಡ ಪ್ರಮಾಣದಲ್ಲಿಯೇ ಮಾಡಿದ್ದೇನೆ. ಇಂಥ ಸಂದರ್ಭದಲ್ಲೂ ಪೋಟೋಗೆ ಫೋಸ್ ಕೊಡುವ, ಫೋಟೋಗಳಿಗೆ ಹಾತೊರೆಯುವ ಮನಸ್ಥಿತಿ ನನ್ನದಲ್ಲ ಎಂದು ರಘುಪತಿ ಭಟ್ ಅವರನ್ನು ಚುಚ್ಚಿದ್ದಾರೆ. ಕ್ವಾರಂಟೈನ್ ನಿಯಮಾವಳಿ ಕುರಿತ ರಾಜ್ಯ ಸರಕಾರದ ಆದೇಶ ಪ್ರತಿಯನ್ನೂ ಟ್ವೀಟ್ ಮಾಡಿದ್ದಾರೆ ಪ್ರಮೋದ್.

ಈ ನಡುವೆ ಗರ್ಭಿಣಿ ಮಹಿಳೆಯನ್ನು ಜಿಲ್ಲಾಡಳಿತ ಮನೆಗೆ ಕಳಿಸಿದೆ. ಗರ್ಭಿಣಿ ಮಹಿಳೆಗೆ ಮನೆ ಆಹಾರವನ್ನೂ ನೀಡದಂತೆ ಜಿಲ್ಲಾಡಳಿತ ನಿರ್ಬಂಧಿಸಿದ್ದು, ಗರ್ಭಿಣಿಯ ಬದುಕಿನೊಂದಿಗೆ ಜಿಲ್ಲಾಡಳಿತ ಬೇಜವಾಬ್ದಾರಿಯ ನಡೆ ಪ್ರದರ್ಶಿಸಿದೆ ಎಂದು ಪ್ರಮೋದ್ ಮಧ್ವರಾಜ್ ಆಕ್ರೋಶ ವ್ಯಕ್ತಪಡಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತದ ನಿರ್ಲಕ್ಷದಿಂದ ದುಬೈಯಿಂದ ಬಂದ ಗರ್ಭಿಣಿ ಮಹಿಳೆಗೆ ಸೂಕ್ತ ಚಿಕಿತ್ಸೆ ದೊರೆಯದೇ ಮಗು ಹೊಟ್ಟೆಯಲ್ಲೇ ಮೃತಪಟ್ಟ ದಾರುಣ ಘಟನೆ ವರದಿಯಾದ ಬೆನ್ನಲ್ಲೇ ಉಡುಪಿ ಜಿಲ್ಲಾಡಳಿತ ಎಚ್ಚತ್ತುಕೊಂಡಂತಿದೆ. ಕ್ವಾರಂಟೈನ್‌ ಅವಧಿ ಮುಗಿದರೂ ಹೊಟೇಲ್ ಕ್ವಾರಂಟೈನ್ ಕೇಂದ್ರದಲ್ಲಿದ್ದು, ದುಬಾರಿ ಬಾಡಿಗೆ ತೆರಲಾಗದೇ ಅತಂತ್ರ ಸ್ಥಿತಿಯಲ್ಲಿದ್ದ ಕೆಲವರನ್ನು ಗಂಟಲು ದ್ರವ ಪರೀಕ್ಷೆ ಬರುವ ಮೊದಲೇ ಮನೆಗೆ ಕಳಿಸಿದೆ.

ಉಭಯ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಕ್ವಾರಂಟೈನ್ ಕೇಂದ್ರಗಳಲ್ಲಿರುವ ನಾಗರಿಕರನ್ನು ನಿರ್ಲಕ್ಷ ಮಾಡಿದೆ ಎಂಬ ದೂರುಗಳು ವ್ಯಾಪಕವಾಗಿವೆ. ಕ್ವಾರಂಟೈನ್ ಕೇಂದ್ರಗಳಲ್ಲಿರುವ ಯಾರೇ ಆಗಲಿ ಅಥವಾ ಅವರ ಪರವಾಗಿ ಹೊರಗಿರುವ ಯಾವುದೇ ನಾಗರಿಕರು ಕ್ವಾರಂಟೈನ್ ಕೇಂದ್ರಗಳಲ್ಲಿರುವ ಸಮಸ್ಯೆಯನ್ನು ವಿಡೀಯೋ, ಆಡಿಯೋ ಸಂದೇಶ ಮೂಲಕ ಹೇಳಿಕೊಂಡರೆ ಅಂಥವರನ್ನು ಎಷ್ಟೇ ದೊಡ್ದವರಾದರೂ ಜೈಲಿಗೆ ಹಾಕುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಸಮ್ಮುಖ ಉಡುಪಿ ಡಿಸಿ ಅಬ್ಬರಿಸಿದ್ದನ್ನು ಸ್ಮರಿಸಬಹುದು.

ಇದೀಗ ಪ್ರಮೋದ್ ಮಧ್ವರಾಜ್ ಅವರು ಟ್ವೀಟ್ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು, ಅವರ ವಿರುದ್ಧವೂ ಉಡುಪಿ ಡಿಸಿ ಕ್ರಮ ಕೈಗೊಂಡು ತನ್ನ ಮಾತಿಗೆ ಬದ್ಧತೆ ತೋರಿಸುತ್ತಾರಾ ಎಂಬ ಕುತೂಹಲವೂ ಜನರಲ್ಲಿರುವುದು ಗಮನಿಸಬಹುದಾಗಿದೆ.

Get real time updates directly on you device, subscribe now.