ಹೆಜಮಾಡಿ: ಲಾಕ್‌ಡೌನ್ ಸಂದರ್ಭ ವ್ಯವಹಾರ ನಷ್ಟ, ಡಾಬಾ ಮಾಲಕ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ
ಪಡುಬಿದ್ರಿ: ಹೆಜಮಾಡಿಯ ‘ಗ್ರೀನ್ ತಡ್ಕ’ ಡಾಬಾ ಮತ್ತು ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದ ದಿನೇಶ್ ಶೆಟ್ಟಿ(45) ಎಂಬವರು ಆತ್ಮಹತ್ಯೆಗೈದಿದ್ದಾರೆ.

ಮನೆಯ ಮಾಡಿಗೆ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.

ಡಾಬಾವನ್ನು ಬೇರೆಯವರಿಗೆ ನಡೆಸಲು ಕೊಟ್ಟಿದ್ದ ದಿನೇಶ್ ಶೆಟ್ಟರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಲಾಕ್‌ಡೌನ್ ಸಂದರ್ಭ ವ್ಯವಹಾರ ಇಲ್ಲದೇ ಕಂಗೆಟ್ಟಿದ್ದು, ಇದೇ ಚಿಂತೆಯಲ್ಲಿ ಮದ್ಯ ವ್ಯಸನಿಯಾಗಿದ್ದರು ಎನ್ನಲಾಗಿದೆ. ಮದ್ಯಪಾನ ಮಾಡಿದ ಸಂದರ್ಭ ಪತ್ನಿಗೆ ಕರೆ ಮಾಡಿ ಪದೇ ಪದೇ ಸಾಯುವುದಾಗಿ ಹೇಳುತ್ತಿದ್ದರು. ಈ ಕಾರಣಕ್ಕೆ ಮದ್ಯದ ಅಮಲಿನಲ್ಲಿ ಶೆಟ್ಟರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಾರೆ ಎಂದು ಮನೆಯವರು ಅವರ ಆತ್ಮಹತ್ಯೆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಒಂಬತ್ತು ತಿಂಗಳ ಹಿಂದೆ ಮಂಗಳೂರಿನ ಕೊಟ್ಟಾರದಲ್ಲಿ ಮನೆ ನಿರ್ಮಿಸಿ ಅಲ್ಲೇ ವಾಸಿಸುತ್ತಿದ್ದ ದಿನೇಶ್ ಶೆಟ್ಟಿಯವರು ನಾಲ್ಕು ದಿನ ಹಿಂದಷ್ಟೇ ಹೆಜಮಾಡಿಯ ಸರಕಾರಿ ಪಿಯು ಕಾಲೇಜು ಸಮೀಪವಿರುವ ತಮ್ಮ ಮನೆಗೆ ಬಂದಿದ್ದರು. ಇಲ್ಲಿ ಒಬ್ಬರೇ ಮನೆಯಲ್ಲಿ ಇರುತ್ತಿದ್ದರು. ಆದಿತ್ಯವಾರ ಎರ್ಮಾಳ್‌ನಲ್ಲಿರುವ ಗೆಳೆಯನೊಬ್ಬನಿಗೆ ಕರೆ ಮಾಡಿದ್ದು, ಸೋಮವಾರ ಬೇಗ ತಮ್ಮ ಮನೆಗೆ ಬರುವಂತೆ ತಿಳಿಸಿದ್ದರು ಎನ್ನಲಾಗಿದೆ. ಬೆಳಿಗ್ಗೆ ಸ್ನೇಹಿತ ಮನೆಗೆ ಹೋಗಿದ್ದ ಸಂದರ್ಭ ಆತ್ಮಹತ್ಯೆಗೈದ ಸಂಗತಿ ಬೆಳಕಿಗೆ ಬಂದಿದೆ.

ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

Get real time updates directly on you device, subscribe now.