ಜಿ. ರಾಜಶೇಖರ್ ಮತ್ತು ಕಿರಂ ನಾಗರಾಜ್ ಇಬ್ಬರೂ ಲೋಕ ನಿಷ್ಠುರಿಗಳು: ಕೆ. ಫಣಿರಾಜ್

ಚಿಂತಕ, ಸಾಕ್ಷಿ ಪ್ರಜ್ಞೆ ಜಿ. ರಾಜಶೇಖರ ಅವರಿಗೆ ಕಿರಂ ನಾಗರಾಜ್  ನೆನಪಿನಲ್ಲಿ ಕೊಡ ಮಾಡುವ ಕಿರಂ ಪುರಸ್ಕಾರ.

ಪ್ರಶಸ್ತಿ ಸ್ವೀಕರಿಸಿದ ಜಿ. ರಾಜಶೇಖರ ಮಾತನಾಡಿ ಸಾಹಿತ್ಯ ನನ್ನ ಉಸಿರು. ಉಸಿರಾಡುವುದಕ್ಕೆ ಯಾರಾದರೂ ಪ್ರಶಸ್ತಿ ಕೊಡುತ್ತಾರೆಯೇ? ಈ ಪುರಸ್ಕಾರ ಉಸಿರಾಡುವುದಕ್ಕೆ ನನಗೆ ನೀಡಿದ ಪುರಸ್ಕಾರ ಎಂಬ ಭಾವ ನನಗೆ ಬಂದಿದೆ ಎಂದರು.

ಕರಾವಳಿ ಕರ್ನಾಟಕ ವರದಿ
ಉಡುಪಿ: ಜಿ. ರಾಜಶೇಖರ್ ಹಾಗೂ ಕಿರಂ ನಾಗರಾಜ್ ತಮ್ಮ ಮನಸ್ಸಿಗೆ ಸ್ಪಷ್ಟವಾಗಿ ಅನಿಸಿದ ವಿಚಾರಗಳನ್ನು ನೇರವಾಗಿ ಹೇಳುವಂತಹ ಲೋಕ ನಿಷ್ಟುರಿಗಳು. ಈ ಕಾರಣದಿಂದ ಯಾವ ಪ್ರಶಸ್ತಿ ಪುರಸ್ಕಾರದ ಹಂಗಿಲ್ಲದ ಲೋಕ ನಿರಾಭಿಮಾನಿಗಳು ಕೂಡಾ ಹೌದು. ಬದುಕಿನ ಉದ್ಯೋಗದ ಮಿತಿಯಾಚೆ ಗಳಿಸಿದ ಜ್ಞಾನದಿಂದ ಇವರಿಬ್ಬರೂ ಲೋಕಜ್ಞಾನಿಗಳಾಗಿದ್ದಾರೆ. ಲೋಕ ಶಿಕ್ಷಕರಾದ ಇವರಿಬ್ಬರಲ್ಲಿ ಕಲಿತವರ ಬಗ್ಗೆ  ಲೆಕ್ಕ ಇಲ್ಲ. ಕಿರಂ ಮೇಸ್ಟ್ರು ಆಗಿದ್ದು ಅಪಾರ ಶಿಷ್ಯವರ್ಗವನ್ನು ಹೊಂದಿದ್ದರೆ, ಸರಕಾರಿ ಉದ್ಯೋಗದಿಂದಾಗಿ ಜಿ. ರಾಜಶೇಖರ್ ಅಪಾರ ಮಿತ್ರ ವರ್ಗವನ್ನು ಸಂಪಾದಿಸಿದ್ದರು. ಆದರೆ ಅವರಿಬ್ಬರೂ ತಮ್ಮ ವಲಯಗಳ ಸ್ತುತಿ ಪಠಣಕ್ಕೆ ಉಬ್ಬಿ ಬೀಗಲಿಲ್ಲ ಎಂದು ಖ್ಯಾತ ಚಿಂತಕ ಪ್ರೊ| ಫಣಿರಾಜ್ ಬೆಂಗಳೂರು ಜನ ಸಂಸ್ಕೃತಿ ಪ್ರತಿಷ್ಠಾನ ಮತ್ತು ಬೆಂಗಳೂರು ಆರ್ಟ್ ಫೌಂಡೇಶನ್ ಆಶ್ರಯದಲ್ಲಿ ರಥಬೀದಿಗೆಳೆಯರು(ರಿ) ಉಡುಪಿ ಸಹಯೋಗದಲ್ಲಿ ಹಿರಿಯ ಚಿಂತಕ, ಸಾಕ್ಷಿ ಪ್ರಜ್ಞೆ ಜಿ. ರಾಜಶೇಖರ ಅವರಿಗೆ ಕಿರಂ ನಾಗರಾಜ್  ನೆನಪಿನಲ್ಲಿ ಕೊಡ ಮಾಡುವ ಕಿರಂ ಪುರಸ್ಕಾರವನ್ನು ಅವರ ನಿವಾಸ ಕೊಳಂಬೆಯಲ್ಲಿ ಪ್ರಧಾನ ಮಾಡಿ ನುಡಿದರು.

ಪ್ರಶಸ್ತಿ ಸ್ವೀಕರಿಸಿದ ಜಿ. ರಾಜಶೇಖರ  ಮಾತನಾಡಿ ಸಾಹಿತ್ಯ ನನ್ನ ಉಸಿರು. ಉಸಿರಾಡುವುದಕ್ಕೆ ಯಾರಾದರೂ ಪ್ರಶಸ್ತಿ ಕೊಡುತ್ತಾರೆಯೇ ? ಹೀಗಾಗಿ ನನಗೆ ಪ್ರಶಸ್ತಿ ಬಗ್ಗೆ ಅಂತಹ ಮೋಹ ಏನಿಲ್ಲ. ಈ ಪುರಸ್ಕಾರ ಉಸಿರಾಡುವುದಕ್ಕೆ ನನಗೆ ನೀಡಿದ ಪುರಸ್ಕಾರ ಎಂಬ ಭಾವ ನನಗೆ ಬಂದಿದೆ. ಕಿರಂ ಸಾಹಿತ್ಯದ ಮಹಾನ್ ಉತ್ಸಾಹಿಗಳು. ಅಡಿಗರ ಕಾವ್ಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಕಿರಂ ಅವರಿಂದಾಗಿಯೇ ಅಡಿಗರ ಕಾವ್ಯದ ಪ್ರಭಾವ ನನ್ನ ಮೇಲೆ ಬೀರಿದೆ ಎಂದರು.

ಚಿಂತಕ ಜಿ. ರಾಜಶೇಖರ್

ರಥಬೀದಿ ಗೆಳೆಯರು ಉಪಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ| ಸುಬ್ರಹ್ಮಣ್ಯ ಜೋಶಿ ವಂದಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎಸ್. ಸಂತೋಷ್ ಬಲ್ಲಾಳ್, ನಾಟಕ ವಿಭಾಗದ ಸಂಚಾಲಕರಾದ ಸಂತೋಷ್ ಶೆಟ್ಟಿ ಹಿರಿಯಡ್ಕ, ಕೋಶಾಧಿಕಾರಿ ವೇದವ್ಯಾಸ ಭಟ್, ರಾಜು ಮಣಿಪಾಲ್, ಕೌಶಿಕ್ ಚೆಟ್ಟಿಯಾರ್, ಡಾ| ರಾಘವೇಂದ್ರ ರಾವ್, ಕೆ. ರವೀಂದ್ರ ಆಚಾರ್ಯ, ಪತ್ರಕರ್ತ ನಝೀರ್ ಪೊಲ್ಯ ಮತ್ತು ಜಿ. ಆರ್. ಕುಟುಂಬಸ್ಥರು ಉಪಸ್ಥಿತರಿದ್ದರು.

Get real time updates directly on you device, subscribe now.