ಕೊರೊನಾ ಮದ್ದು ಎಂದು ವೈರಲ್ ಮಾಡುವವರ ವಿರುದ್ಧ ನಿಗಾ ವಹಿಸಿ: ಸಚಿವ ಹೆಬ್ಬಾರ

ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವಿವಿಧ ಕಂಪನಿ ಮಾತ್ರೆಗಳನ್ನು ಕೋವಿಡ್-19ಗೆ ಮದ್ದು ಎಂದು ಬಿಂಬಿಸಲಾಗುತ್ತಿದೆ.

ಕರಾವಳಿ ಕರ್ನಾಟಕ ವರದಿ/ರವಿತೇಜ ಕಾರವಾರ
ಕಾರವಾರ: ಕೋವಿಡ್-19ಗೆ ಅಧಿಕೃತವಾದ ಔಷಧಿಯನ್ನು ಇನ್ನೂ ಕಂಡು ಹಿಡಿದಿರುವುದಿಲ್ಲ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆ ಸೂಚಿಸಿದ ನಂತರವೇ ಯಾವುದೇ ಔಷಧಿಯಾಗಲಿ ಅಧಿಕೃತ ಔಷಧಿಯಾಗುವುದು. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವಿವಿಧ ಕಂಪನಿ ಮಾತ್ರೆಗಳನ್ನು ಕೋವಿಡ್-19ಗೆ ಮದ್ದು ಎಂದು ಬಿಂಬಿಸಲಾಗುತ್ತಿದ್ದು,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದರ ಬಗ್ಗೆ ನಿಗಾ ವಹಿಸಿ ಎಂದು ಸಕ್ಕರೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಛೇರಿ ಸಂಭಾಗಣದಲ್ಲಿ ಸೋಮವಾರ ಜಿಲ್ಲಾ ಪಂಚಾಯತ್ ಕೆ.ಡಿ.ಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೋನಾ ಸೋಂಕಿತರಿಗೆ ಯಾವುದೇ ರೀತಿಯ ಕೊರತೆ ಅಥವಾ ಸಮಸ್ಯೆಯಾಗದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಯಾರನ್ನೂ ತಾರತ್ಯಮದಿಂದ ಕಾಣಬಾರದು ಪ್ರತಿಯೊಬ್ಬರಿಗೂ ಉತ್ತಮ ಚಿಕಿತ್ಸೆ ಲಭ್ಯವಾಗಬೇಕು ಕೋವಿಡ್ ಪರೀಕ್ಷೆಯನ್ನು ಆದ್ಯತೆಯ ಮೇರೆಗೆ ಗಂರ್ಭಿಣಿ ಮಹಿಳೆಯರಿಗೆ, ವಯೋವೃದ್ಧರಿಗೆ ಹಾಗೂ ಚಿಕ್ಕ ಮಕ್ಕಳಿಗೆ ಮಾಡಬೇಕು ಆಸ್ಪತ್ರೆ ಹೊರ ಮತ್ತು ಒಳ ಸ್ವಚ್ಛತೆಯನ್ನು ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.

ಗಣಿ ಇಲಾಖೆಯ ಪ್ರಗತಿ ಪರಿಶೀಲಿಸಿದ ಸಚಿವರು ಹೊಸ ಮರಳು ನೀತಿಯಲ್ಲಿ ಮರಳು ಸಾಗಾಣಿಕೆಯಲ್ಲಿ ಸಾಕಷ್ಟು ಸಡಿಲಿಕೆ ನೀಡಲಾಗಿದೆ. ಹೊಸ ಗಣಿ ನೀತಿಯ ಬಗ್ಗೆ ಸಾರ್ವಜನಿಕರಲ್ಲಿ ಪ್ರಚಾರ ನೀಡುವ ಮೂಲಕ ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳುವಂತೆ ಮಾಡಬೇಕೆಂದರು. ನಂತರ ಅರಣ್ಯ ಇಲಾಖೆ ಪ್ರಗತಿ ಪರೀಶಿಲಿಸಿ ಅರಣ್ಯ ಇಲಾಖೆಯೂ ಸಾರ್ವಜನಿಕ ಆಸ್ತಿಯಂತಿದ್ದು ಇಲಾಖೆಯ ಅಧಿಕಾರಿಗಳು ಜನರ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಬೇಕು ಎಲ್ಲ ಸರ್ಕಾರಿ ಕಟ್ಟಡ ಶಾಲಾ-ಕಾಲೇಜು ಆವರಣಗಳಲ್ಲಿ ಹಣ್ಣು-ಹಂಪಲುಗಳ ಮರಗಳನ್ನು ಬೆಳೆಸಲು ಕ್ರಮ ಕೈಗೊಳ್ಳಬೇಕೆಂದರು.

ಜಿಲ್ಲಾ ಅಲ್ಪ ಸಂಖ್ಯಾತರ ಇಲಾಖೆ ಪ್ರಗತಿ ಪರಿಶೀಲಿಸಿ ಕಾರವಾರಕ್ಕೆ ಮಂಜೂರು ಆಗಿರುವ ಅಲ್ಪ ಸಂಖ್ಯಾತ ಬಾಲಕಿಯರ ವಸತಿ ನಿಲಯವನ್ನು ಭಟ್ಕಳದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಅಲ್ಲಿರುವ ಹೆಚ್ಚಿನ ಅಲ್ಪ ಸಂಖ್ಯಾತ ಬಾಲಕಿಯರಿಗೆ ಅನುಕೂಲವಾಗಲಿದೆ ಎಂದರು.

ಶಿಕ್ಷಣ ಇಲಾಖೆ ಬಗ್ಗೆ ಪರಿಶೀಲಿಸಿ ಎಸ್ ಎಸ್ ಎಲ್ ಸಿ ಪರಿಕ್ಷೆಯಲ್ಲಿ ರಾಜ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯು ಮೂರನೇ ಸ್ಥಾನ ಪಡೆದಿರುವುದು ಶ್ಲಾಘನೀಯವಾಗಿದೆ. ಪರೀಕ್ಷೆಗಳನ್ನು ಯಶಸ್ವಿಗೊಳಿಸಿದ ಎಲ್ಲಾ ಅಧಿಕಾರಿಗಳು ಅಭಿನಂದನೆಗೆ ಅರ್ಹರು ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಕರು ಮನೆಯಿಂದಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತೆ ಇಲಾಖೆಯು ಉತ್ತೇಜಿಸಬೇಕೆಂದರು.

ಈ ಸಂದರ್ಭದಲ್ಲಿ ಶಾಸಕರಾದ ದಿನಕರಶೆಟ್ಟಿ, ಸುನೀಲ್ ನಾಯ್ಕ, ರೂಪಾಲಿ ನಾಯ್ಕ, ಜಿ.ಪಂ.ಅಧ್ಯಕ್ಷೆ ಜಯಶ್ರೀ ಮೊಗೇರ್, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ., ಜಿ.ಪಂ ಸಿಇಒ ಎಂ.ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.

 

 

Get real time updates directly on you device, subscribe now.