ಪೈಶಾಚಿಕ ಕೃತ್ಯ: ಪ್ರಿನ್ಸಿಪಾಲ್, ಶಿಕ್ಷಕರು ವಿದ್ಯಾರ್ಥಿಗಳಿಂದ 10ನೆ ತರಗತಿ ಬಾಲಕಿ ಮೇಲೆ ಏಳು ತಿಂಗಳ ಕಾಲ ಅತ್ಯಾಚಾರ

ಚಿತ್ರಹಿಂಸೆ ಸಹಿಸಲಾಗದೆ ಕೊನೆಗೂ ಬಾಲಕಿಯಿಂದ ದೂರು

ಬಿಹಾರದ ಖಾಸಗಿ ಶಾಲೆಯೊಂದರಲ್ಲಿ ಸತತ ಏಳು ತಿಂಗಳ ಕಾಲ ಮೂವರು ಶಿಕ್ಷಕರು, 15 ವಿದ್ಯಾರ್ಥಿಗಳು ಸೇರಿ 10 ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಪಾಟ್ನಾ: ಬಿಹಾರದ ಖಾಸಗಿ ಶಾಲೆಯೊಂದರಲ್ಲಿ ಸತತ ಏಳು ತಿಂಗಳ ಕಾಲ ಮೂವರು ಶಿಕ್ಷಕರು, 15 ವಿದ್ಯಾರ್ಥಿಗಳು ಸೇರಿ 10 ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಸಾರನ್ ಜಿಲ್ಲೆಯ ದಿಪೇಶ್ವರ್ ಬಾಲ್ ವಿದ್ಯಾನಿಕೇತನ್ ಶಾಲೆಯಲ್ಲಿ ಈ ಪೈಶಾಚಿಕ ಘಟನೆ ನಡೆದಿದೆ.

ನಿತ್ಯದ ನರಕ ಯಾತನೆ ಸಹಿಸಿಕೊಳ್ಳಲಾಗದೆ ಕೊನೆಗೂ 14 ವರ್ಷದ ಬಾಲಕಿ ತನ್ನ ತಂದೆಯೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನಲ್ಲಿ 15 ವಿದ್ಯಾರ್ಥಿಗಳು, ಪ್ರಿನ್ಸಿಪಾಲ್ ಹಾಗೂ ಇಬ್ಬರು ಶಿಕ್ಷಕರನ್ನು ಹೆಸರಿಸಿದ್ದಾಳೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿನ್ಸಿಪಾಲ್ ಉದಯ್ ಕುಮಾರ್ ಸಿಂಗ್, ಶಿಕ್ಷಕ ಬಾಲಾಜಿ ಹಾಗೂ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಉಳಿದ 14 ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಎಕ್ಮಾ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಅನುಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಬಾಲಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಆಕೆಯನ್ನು ಚಾಪ್ರದದಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೊಳಪಡಿಸಲಾಯಿತು. ಬಳಿಕ ಆರೋಪಿಗಳನ್ನು ಬಂಧಿಸಲಾಯಿತು.

ವಿದ್ಯಾರ್ಥಿನಿ ನೀಡಿರುವ ದೂರಿನ ಪ್ರಕಾರ ಕಳೆದ ಡಿಸೆಂಬರ್ ತಿಂಗಳಲ್ಲಿ ಶಾಲೆಯ ಶೌಚಾಲಯದಲ್ಲಿ ಆಕೆಯ ಮೇಲೆ ಐವರು ವಿದ್ಯಾರ್ಥಿಗಳು ಅತ್ಯಾಚಾರ ಮಾಡಿ, ಅದನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಈ ವಿಡಿಯೋ ತೋರಿಸಿ ಇತರ ಬೆದರಿಕೆಯೂಡ್ಡಿ ಇತರ ವಿದ್ಯಾರ್ಥಿಗಳೊಂದಿಗೆ ಆಗಾಗ್ಗೆ ಅತ್ಯಾಚಾರ ನಡೆಸಿದ್ದಾರೆ.

ವಿಡಿಯೋ ವೀಕ್ಷಿಸಿದ ಪ್ರಿನ್ಸಿಪಾಲ್ ಹಾಗೂ ಇಬ್ಬರು ಶಿಕ್ಷಕರು ಕೂಡಾ ಘಟನೆ ನಡೆದ 17 ದಿನಗಳ ನಂತರ ಸಂತ್ರಸ್ತೆಯನ್ನು ಬೆದರಿಸಿ, ಒಂದು ತಿಂಗಳವರೆಗೂ ಶಾಲಾ ಆವರಣದಲ್ಲಿಯೇ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತೆಯ ತಂದೆ ಬಿಹಾರದ ಹೊರಗಡೆ ಕೆಲಸ ಮಾಡುತ್ತಾರೆ, ಮನೆಗೆ ಬಂದಾಗ ಬಾಲಕಿ ಈ ವಿಷಯವನ್ನು ತಿಳಿಸಿದ್ದಾಳೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮುನ್ನ ಆಕೆ ಹಾಗೂ ಆಕೆಯ ತಂದೆ ಶಾಲೆ ಬಳಿಗೆ ಬಂದಾಗ ಮೂವರು ಶಿಕ್ಷಕರು ಎದುರಿಸಿದ್ದಾರೆ. ತಂದೆ ಮಗಳ ಮೇಲೆ ಹಲ್ಲೆ ಮಾಡಲಾಗಿದ್ದು, ಶಾಲೆಯಿಂದ ಕಿತ್ತುಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಸರನ್ ಎಸ್ಪಿ ಹರಿ ಕಿಶೋರ್ ರಾಯ್ ಹೇಳಿದ್ದಾರೆ.

Get real time updates directly on you device, subscribe now.