ಜಾಮೀನಿನ ಮೇಲೆ ಹೊರಬಂದ ಕೊಲೆ ಆರೋಪಿಗಳು: ಕ್ಷೇತ್ರಕ್ಕೆ ಹೋಗಿ ಸನ್ಮಾನ ಮಾಡಿದ ಕೇಂದ್ರ ಸಚಿವ!

ಕೊಲೆ ಆರೋಪದಲ್ಲಿ ಜೈಲಿನಲ್ಲಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದ ಬಳಿಕ ಅವರಿಗೆ ಸನ್ಮಾನ ಮಾಡಿದ ವಿಲಕ್ಷಣ ಘಟನೆ ಝಾರ್ಖಂಡ್ ರಾಜ್ಯದ ರಾಂಚಿಯಿಂದ ವರದಿಯಾಗಿದೆ.

ರಾಂಚಿ: ಕೊಲೆ ಆರೋಪದಲ್ಲಿ ಜೈಲಿನಲ್ಲಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದ ಬಳಿಕ ಅವರಿಗೆ ಸನ್ಮಾನ ಮಾಡಿದ ವಿಲಕ್ಷಣ ಘಟನೆ ಝಾರ್ಖಂಡ್ ರಾಜ್ಯದ ರಾಂಚಿಯಿಂದ ವರದಿಯಾಗಿದೆ. ಅಷ್ಟಕ್ಕೂ ಈ ಕೊಲೆ ಆರೋಪಿಗಳನ್ನು ಸನ್ಮಾನ ಮಾಡಿದ್ದು ಯಾರು ಗೊತ್ತೆ? ಕೇಂದ್ರದ ಸಚಿವರೊಬ್ಬರು ಆರೋಪಿಗಳಿಗೆ ಸನ್ಮಾನ ಮಾಡಿದವರು!

ಕಳೆದ ವರ್ಷ ಜೂನ್ 30 ರಂದು ಝಾರ್ಖಂಡ್‌ನ ರಾಮ್‌ಗಡ್ ಎಂಬಲ್ಲಿ ಅಲಿಮುದ್ದೀನ್ ಅನ್ಸಾರಿ ಎಂಬವರನ್ನು ತಂಡವೊಂದು ಥಳಿಸಿ ಕೊಂದಿತ್ತು. ಅವರ ಕಾರಿನಲ್ಲಿ ಗೋಮಾಂಸವಿದೆ ಎಂದು ಶಂಕಿಸಿದ್ದ ದುಷ್ಕರ್ಮಿಗಳ ತಂಡ ಅವರನ್ನು ಕಾರಿನಿಂದ ಹೊರಕ್ಕೆಳೆದು ಸಾರ್ವಜನಿಕವಾಗಿ ದೊಣ್ಣೆಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿತ್ತು. ಅನ್ಸಾರಿ ಅವರ ಕಾರಿಗೂ ಸಹ ಬೆಂಕಿ ಹಚ್ಚಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಗೋ ರಕ್ಷಣೆಯ ಹೆಸರಿನಲ್ಲಿ ಜನರನ್ನು ಕೊಲ್ಲುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ ಮರು ದಿನವೇ ಈ ಘಟನೆ ನಡೆದು ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡುಮಾಡಿತ್ತು.

ಝಾರ್ಖಂಡ್ ಸರ್ಕಾರ ಈ ಕೊಲೆಯಲ್ಲಿ ಆರೋಪಿಗಳಾದ ಬಿಜೆಪಿ ನಾಯಕರನ್ನೂ ಒಳಗೊಂಡಂತೆ 11 ಆರೋಪಿಗಳನ್ನು ಬಂಧಿಸಿ ವಿಚಾರಣೆಗಾಗಿ ತ್ವರಿತಗತಿಯ ನ್ಯಾಯಾಲಯ ಸ್ಥಾಪಿಸಿತ್ತು. 9 ತಿಂಗಳ ವಿಚಾರಣೆಯ ಬಳಿಕ ಫಾಸ್ಟ್ ಟ್ರ್ಯಾಕ್ ಕೋರ್ಟ್ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಝಾರ್ಖಂಡ್ ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಬಳಿಕ ಇತ್ತೀಚೆಗಷ್ಟೆ ಆರೋಪಿಗಳು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದರು.

ಆರೋಪಿಗಳೆಲ್ಲರೂ ಕೇಂದ್ರ ಸಚಿವ ಜಯಂತ್ ಸಿನ್ಹಾ ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರಕ್ಕೆ ಸೇರಿದವರಾಗಿದ್ದು ಅವರೆಲ್ಲರೂ ಹಝಾರಿಬಾಗ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಜಯಂತ್ ಸಿನ್ಹಾ ತಮ್ಮ ಕ್ಷೇತ್ರಕ್ಕೆ ತೆರಳಿ ಎಲ್ಲರಿಗೂ ಸನ್ಮಾನ ಮಾಡಿದ್ದಾರೆ.

ಕೇಂದ್ರ ಸಚಿವ ಜಯಂತ್ ಸಿನ್ಹಾ ಕೊಲೆ ಆರೋಪಿಗಳನ್ನು ಸನ್ಮಾನ ಮಾಡಿರುವುದು ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದೆ.

Get real time updates directly on you device, subscribe now.