ಸೌಹಾರ್ದ ಪರಂಪರೆಗೆ ಮುಸ್ಲಿಂ ಕುಟುಂಬದ ಕೊಡುಗೆ: ಮಗಳ ಮದುವೆಯಲ್ಲೇ 11 ಹಿಂದೂ ಜೋಡಿ ವಿವಾಹ

ಭಾವೈಕ್ಯತೆಯ ಬೆಸುಗೆ ಬೆಸೆದ ಇನಾಯತ್ ಕುಟುಂಬ ಭಾವೈಕ್ಯತೆಯ ಬೆಸುಗೆ ಬೆಸೆದ ಇನಾಯತ್ ಕುಟುಂಬ

ಬಳ್ಳಾರಿ ಜಿಲ್ಲೆಯ ಮುಸ್ಲಿಂ ಸಮುದಾಯದ ಶಿಕ್ಷಕರೋರ್ವರು ತನ್ನ ಪುತ್ರಿಯ ವಿವಾಹದಲ್ಲಿ ಹಿಂದೂ ಧರ್ಮದ ಹನ್ನೊಂದು ಜೋಡಿ ವಧು-ವರರ ಸಾಮೂಹಿಕ ವಿವಾಹ ನಡೆಸಿ ನಾಡಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿದ ಅಪರೂಪದ ಸಂಗತಿ ವರದಿಯಾಗಿದೆ.

ಹಗರಿಬೊಮ್ಮನಹಳ್ಳಿ: ಬಳ್ಳಾರಿ ಜಿಲ್ಲೆಯ ಮುಸ್ಲಿಂ ಸಮುದಾಯದ ಶಿಕ್ಷಕರೋರ್ವರು ತನ್ನ ಪುತ್ರಿಯ ವಿವಾಹದಲ್ಲಿ ಹಿಂದೂ ಧರ್ಮದ ಹನ್ನೊಂದು ಜೋಡಿ ವಧು-ವರರ ಸಾಮೂಹಿಕ ವಿವಾಹ ನಡೆಸಿ ನಾಡಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿದ ಅಪರೂಪದ ಸಂಗತಿ ವರದಿಯಾಗಿದೆ.

ನಾರಾಯಣ ದೇವರ ಕೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್. ಇನಾಯತ್ ಅವರೇ ಈ ಮಹಾನ್ ವ್ಯಕ್ತಿ.

ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ತನ್ನ ಮಗಳ ಮದುವೆಯನ್ನೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲೇ ಆಕೆಯ ಇಚ್ಛೆಯಂತೆಯೇ ನೆರವೇರಿಸಿದರು.

ಪರಿಶಿಷ್ಟ ಜಾತಿಯ ಮೂರು, ಪರಿಶಿಷ್ಠ ಪಂಗಡದ ಎರಡು ಮತ್ತು ಇತರ ಜಾತಿಯ ಆರು ಜೋಡಿಗಳ ಮದುವೆಯನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದು, ವಿವಾಹಕ್ಕೆ ಬಂದಿದ್ದ ಮೂರು ಸಾವಿರ ಜನರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದರು. ಸಾಮೂಹಿಕ ವಿವಾಹಕ್ಕೆ ಐದು ಲಕ್ಷ ರೂ. ವೆಚ್ಚ ಭರಿಸಿದ್ದಲ್ಲದೇ, ನವ ಜೋಡಿಗಳಿಗೆ ತವರು ಮನೆ ಉಡುಗೊರೆಯಾಗಿ ಗಾದ್ರೇಜ್ ಕವಾಟು ಮತ್ತು ಅಡುಗೆ ಪರಿಕರಗಳನ್ನೂ ನೀಡಿದರು.

ಇನಾಯತ್ ಅವರ ಇಂಜಿನಿಯರಿಂಗ್ ಪದವೀಧರೆ ಪುತ್ರಿ ಎಸ್. ನಗ್ಮಾ ಅವರು ಎಸ್.ಕೆ.ಎಸ್.ರಸೂಲ್ ಎಂಬವರನ್ನು ವಿವಾಹವಾದರು.

ಜನವಾದಿ ಮಹಿಲಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷರಾದ ಕೆ. ನೀಲಾ, ವೀರಶೈವ ಲಿಂಗಾಯತ ಪಂಚಮಸಾಲಿ ಶಾಖಾ ಮಠದ ಮಹಾಂತ ಸ್ವಾಮೀಜಿ, ನಂದಿಪುರ ಮಹೇಶ್ವರ ಸ್ವಾಮೀಜಿ, ಹಾಲಶಂಕರ ಸ್ವಾಮೀಜಿ, ಕ್ರೈಸ್ತ ಧರ್ಮಗುರು ವಿಜಯಕುಮಾರ್, ಇಸ್ಲಾಂ ಧರ್ಮದ ಮೌಲಾನಾ ದಾದಾ ಸಾಹೇಬ್, ಕ್ಷೇತ್ರ ಶಿಕ್ಷಣ್ಧಿಕಾರಿ ಶೇಖರಪ್ಪ ಹೊರಪೇಟೆ, ಶಿಕ್ಷಣ ಸಂಪನ್ಮೂಲ ಅಧಿಕಾರಿ ಬೋರಯ್ಯ ಮುಂತಾದ ಗಣ್ಯರು ನವಜೋಡಿಗಳಿಗೆ ಶುಭ ಹಾರೈಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ತಮ್ಮ ಮನೆಯ ಮದುವೆ ಸಮಾರಂಭವೋ ಎಂಬಂತೆ ಊಟೋಪಚಾರ, ಆಸನ, ವಸತಿ ವ್ಯವಸ್ಥೆಗಳಲ್ಲಿ ಸಹಾಯ ಹಸ್ತ ನೀಡಿ ಗಮನ ಸೆಳೆದರು.

ಯಾವುದೇ ಅನಗತ್ಯ ದುಂದುವೆಚ್ಚವಿಲ್ಲದೇ ಮಗಳ ಆಸೆಯಂತೆ ಸಾಮೂಹಿಕ ವಿವಾಹದಲ್ಲೇ ಮಗಳ ವಿವಾಹ ಕಾರ್ಯ ಯಶಸ್ವಿಯಾಗಿ ನಡೆದಿರುವುದು ತಂದೆ ಇನಾಯತ್ ಮತ್ತು ತಾಯಿ ನಾಪೂನ್ನೀಸಾ ಅವರಿಗೆ ಅಪಾರ ಸಂತಸ ನೀಡಿದೆ. ತಂದೆ ತನ್ನ ಮಾತಿಗೆ ಮನ್ನಣೆ ನೀಡಿದ್ದು ಪುತ್ರಿ ನಗ್ಮಾ ಮತ್ತು ಆಕೆಯ ಪತಿ ಎಸ್.ಕೆ.ಎಸ್.ರಸೂಲ್ ಅವರಿಗೂ ಖುಶಿ ಕೊಟ್ಟಿದೆ. ಬಡವರ ಬಗೆಗಿನ ತನ್ನ ಮಗಳ ಪ್ರೀತಿಯ ಬಗ್ಗೆ ತಂದೆ ಇನಾಯತ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದರೆ, ಮದುವೆಗೆ ಬಂದವರೆಲ್ಲರೂ ಈ ಭಾವೈಕ್ಯತೆಯ ಬೆಸುಗೆ ಬೆಸೆದ ಇನಾಯತ್ ಮತ್ತು ಅವರ ಕುಟುಂಬದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿರುವುದು ಗಮನಾರ್ಹ.

Get real time updates directly on you device, subscribe now.