ನಾಳೆಯಿಂದ 1 ವಾರ ರಾಜ್ಯಾದ್ಯಂತ ಶಾಲಾ ಕಾಲೇಜು, ಮಾಲ್, ಚಿತ್ರಮಂದಿರ ಬಂದ್. ಮದುವೆ, ಗೃಹಪ್ರವೇಶಕ್ಕೆ ನಿರ್ಬಂಧ!

ಮದುವೆ, ಸಭೆ-ಸಮಾರಂಭಗಳಿಗೂ ನಿರ್ಬಂಧ

ಒಂದು ವಾರದ ನಂತರ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಕೊರೋನಾ ವೈರಸ್ ಹರಡದಂತೆ ತಡೆಯಲು ನಾಳೆಯಿಂದ ಒಂದು ವಾರ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಜೊತೆಗೆ ಮದುವೆ, ಸಭೆ-ಸಮಾರಂಭಗಳಿಗೂ ನಿರ್ಬಂಧ ಹೊರಡಿಸಿ ಸರ್ಕಾರ ಆದೇಶಿಸಿದೆ.


ಒಂದು ವಾರದ ನಂತರ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಒಂದು ವಾರಗಳ ಕಾಲ ಕ್ರೀಡಾ ಕಾರ್ಯಕ್ರಮಗಳು, ನೈಟ್ ಕ್ಲಬ್, ಪಬ್, ಮೇಳ, ಸೆಮಿನಾರ್, ಜಾತ್ರೆಗಳನ್ನು ಬಂದ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ವಿಶ್ವವಿದ್ಯಾಲಯದ ಪರೀಕ್ಷೆಗಳು ಎಂದಿನಂತೆ ನಡೆಯುತ್ತವೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಕೊರೋನಾ ವೈರಸ್ ಹರಡದಂತೆ ತಡೆಯಲು ಮಾಲ್, ಚಿತ್ರಮಂದಿರಗಳು ಹಾಗೂ ಎಲ್ಲಾ ಹವಾನಿಯಂತ್ರಿತ ಜಾಗಗಳನ್ನು ಬಂದ್ ಮಾಡುವಂತೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ನಾರಾಯಣಮೂರ್ತಿ ಅವರು ಸರ್ಕಾರವನ್ನು ಒತ್ತಾಯಿಸಿದ್ದರು.

ಕಲಬುರಗಿಯಲ್ಲಿ 76 ವರ್ಷದ ವೃದ್ಧರೊಬ್ಬರು ಮಂಗಳವಾರ ರಾತ್ರಿ ಮೃತಪಟ್ಟಿರುವುದು ಸೇರಿದಂತೆ ರಾಜ್ಯದಲ್ಲಿ ಒಟ್ಟಾರೇ ಆರು ಕೊರೋನಾ ವೈರಸ್ ಪ್ರಕರಣಗಳು ದೃಢಪಟ್ಟಿದೆ.

Get real time updates directly on you device, subscribe now.