ಬೆಂಗಳೂರಿನ ಆರೆಸ್ಸೆಸ್ ಉನ್ನತ ಸಭೆ ರದ್ದು

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ; ಸರಕಾರದ ಮುಖಭಂಗ ತಪ್ಪಿಸಲು ಆರೆಸ್ಸೆಸ್ ಸಭೆ ರದ್ದು

ಮಾ15ರಿಂದ17ರವರೆಗೆ ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಅಖಿಲ ಭಾರತೀಯ ಪ್ರತಿನಿಧಿ ಸಭಾವನ್ನು ಆರೆಸ್ಸೆಸ್ ಕೊನೆಗೂ ರದ್ದುಪಡಿಸಿದೆ.

ಬೆಂಗಳೂರು: ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಒಂದು ವಾರದ ಕಾಲ ರಾಜ್ಯದಾದ್ಯಂತ ಮಾಲ್, ಸಿನೆಮಾ ಮಂದಿರ, ಪಬ್ ಮುಂತಾದವುಗಳನ್ನು ಬಂದ್ ಮಾಡಲು ಸರ್ಕಾರ ಆದೇಶ ಹೊರಡಿಸಿದ್ದರೂ ಮಾ15ರಿಂದ17ರವರೆಗೆ ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್)ವನ್ನು ಆರೆಸ್ಸೆಸ್ ಕೊನೆಗೂ ರದ್ದುಪಡಿಸಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರಿ ಹೊರಡಿಸಿದ ಆದೇಶ ಆರೆಸ್ಸೆಸ್ಗೆ ಅನ್ವಯವಾಗುವುದಿಲ್ಲವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವೃವಾಗಿ ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ ಸರಕಾರದ ಮುಖಭಂಗ ತಪ್ಪಿಸಲು ಆರೆಸ್ಸೆಸ್ ಸಭೆ ರದ್ದುಗೊಳಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೊರೊನಾ ಬಗ್ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿವ ಉದ್ದೇಶದಿಂದ ಎಬಿಪಿಎಸ್ ರದ್ದು ಮಾಡಲಾಗಿದೆ ಎಂದು ಸರಕಾರ್ಯವಾಹ ಸುರೇಶ್ ಜೋಷಿ (ಬೈಯ್ಯಾಜಿ ) ಟ್ವೀಟ್ ಮಾಡಿದ್ದಾರೆ. ಕೊರೋನಾ ಗಂಭೀರತೆ ಪರಿಗಣಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿ ಅನುಸಾರ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಮಾರ್ಚ್ 15 ರಿಂದ ಬೆಂಗಳೂರಿನಲ್ಲಿ ಆರೆಸ್ಸೆಸ್ ಸಮಾವೇಶ ಅನಿರ್ಬಂಧಿತವಾಗಿ ನಡೆಯಲಿದೆ. ಆರೆಸ್ಸೆಸ್ಗೆ ಈ ಸರ್ಕಾರಿ ಆದೇಶ ಅನ್ವಯವಾಗುವುದಿಲ್ಲವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದರು.

ಆರೆಸ್ಸೆಸ್ ಸಮಾವೇಶದಲ್ಲಿ ದೇಶದ ಹಲವೆಡೆಯಿಂದ 1500 ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಲಿದ್ದಾರೆ. ಕನಿಷ್ಟ ಪಕ್ಷ ಈ ಪ್ರತಿನಿಧಿಗಳ ಆರೋಗ್ಯದ ದೃಷ್ಟಿಯಿಂದಲಾದರೂ ಸಮಾವೇಶವನ್ನು ಮುಂದೂಡುವಂತೆ ಸಿದರಾಮಯ್ಯ ಟ್ವೀಟ್ ಮೂಲಕ ಯಡಿಯೂರಪ್ಪನವರನ್ನು ಆಗ್ರಹಿಸಿದ್ದರು.

ಮಾ.15ರ ಬೆಳಗ್ಗೆ ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಎಬಿಪಿಎಸ್ ಗೆ ಚಾಲನೆ ನೀಡಬೇಕಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸಹಿತ ಆರೆಸ್ಸೆಸ್ ಪರಿವಾರ ಸಂಘಟನೆಯ ಪ್ರಮುಖರು ಭಾಗವಹಿಸುವವರಿದ್ದರು.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಒಂದು ವಾರದ ಕಾಲ ರಾಜ್ಯದಾದ್ಯಂತ ಮಾಲ್, ಸಿನೆಮಾ ಮಂದಿರ, ಪಬ್ ಮುಂತಾದವುಗಳನ್ನು ಬಂದ್ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಸಭೆ ಸಮಾರಂಭಗಳ ಮೇಲೂ ರಾಜ್ಯ ಸರ್ಕಾರ ನಿರ್ಬಂಧ ಹೇರಿದ್ದು ದೊಡ್ಡ ಮಟ್ಟದಲ್ಲಿ ಜನ ಸೇರುವುದನ್ನು ನಿರ್ಬಂಧಿಸಿದೆ.

Get real time updates directly on you device, subscribe now.