ಅನಧಿಕೃತ ಆಯುರ್ವೇದ ಟ್ರಯಲ್! ಕೋವಿಡ್-19 ರೋಗಿಗಳ ಜೀವದ ಜೊತೆ ಬಿಎಸ್‌ವೈ-ಡಾ. ಕಜೆ ಚೆಲ್ಲಾಟ?

ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದಲ್ಲಿ 10 ಕೋವಿಡ್ -19 ರೋಗಿಗಳ ಮೇಲೆ ಆಯುರ್ವೇದ ಔಷಧದ ಪ್ರಯೋಗಕ್ಕೆ ಒಪ್ಪಿಗೆ ನೀಡಿರುವುದು ವೈದ್ಯಕೀಯ ಲೋಕದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ಕೋವಿಡ್-19 ರೋಗಕ್ಕೆ ಆಯುರ್ವೇದದಲ್ಲಿ ಚಿಕಿತ್ಸೆ ಇದೆ ಎಂದು ಪ್ರತಿಪಾದಿಸುತ್ತಿರುವ ಡಾ. ಗಿರಿಧರ ಕಜೆ ಎಂಬ ಆಯುರ್ವೇದ ವೈದ್ಯರ ಮಾತಿಗೆ ಮರುಳಾಗಿರುವ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದಲ್ಲಿ 10 ಕೋವಿಡ್ -19 ರೋಗಿಗಳ ಮೇಲೆ ಆಯುರ್ವೇದ ಔಷಧದ ಪ್ರಯೋಗಕ್ಕೆ ಒಪ್ಪಿಗೆ ನೀಡಿರುವುದು ವೈದ್ಯಕೀಯ ಲೋಕದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಡಾ. ಗಿರಿಧರ ಕಜೆ ಅವರನ್ನು ತಮ್ಮ ನಿವಾಸಕ್ಕೆ ಕರೆಯಿಸಿ ಚರ್ಚಿಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಒಂದು ನಿರ್ದಿಷ್ಟ ಆಸ್ಪತ್ರೆಯಲ್ಲಿ ಹತ್ತು ಮಂದಿ ಕೋವಿಡ್ -19 ರೋಗಿಗಳ ಮೇಲೆ ಈ ಪ್ರಯೋಗಕ್ಕೆ ಒಪ್ಪಿಗೆ ನೀಡಿದ್ದಾರೆ. ಆದರೆ ಇದು ಒಂದು ಅನಧಿಕೃತ ಪ್ರಯೋಗವಾಗಿದ್ದು ಕೋವಿಡ್ -19 ರೋಗಿಗಳ ಜೀವದ ಜೊತೆ ರಾಜ್ಯ ಸರ್ಕಾರ ಮತ್ತು ಡಾ. ಗಿರಿಧರ್ ಕಜೆ ಪ್ರಾಣಘಾತಕ ಆಟವಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ತಾನು ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಿದ್ದೇನೆ. ಈ ಪ್ರಯೋಗ ಯಶಸ್ವಿ ಆದರೆ ನಾನು ಕೋವಿಡ್ -19 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತೇನೆ ಎಂದು ಹೇಳಿರುವ ಡಾ. ಗಿರಿಧರ್ ಕಜೆ ದೆಹಲಿಯ ಐಸಿಎಮ್ಆರ್‌ಗೆ ರಾಜ್ಯ ಸರ್ಕಾರದ ಮೂಲಕ ಈ ಕುರಿತು ಪ್ರಸ್ತಾವನೆ ಕಳುಹಿಸಲಾಗಿದ್ದು ಎಲ್ಲ ಪರಿಶೀಲನೆಗಳ ಬಳಿಕವೇ ಪ್ರಯೋಗಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಆದರೆ ರಾಜ್ಯ ಸರ್ಕಾರದ ಕೆಲ ಮೂಲಗಳ ಪ್ರಕಾರ ಐಸಿಎಂಆರ್‌ನಿಂದ ಆಯುರ್ವೇದ ಔಷಧ ಪ್ರಯೋಗಕ್ಕೆ ಯಾವುದೇ ಒಪ್ಪಿಗೆ ಸಿಕ್ಕಿಲ್ಲ. ಆಯುರ್ವೇದ ಔಷಧ ಪ್ರಯೋಗದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಕೆಲವರು ಅನುಮತಿ ಕೊಡಿ ಎಂದು ಕೇಳಿದ್ದಾರೆ. ಆದರೆ ಈ ವಿಷಯದಲ್ಲಿ ನಾವು ಅಂತರಾಷ್ಟ್ರೀಯ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದ್ದು ಆಯುರ್ವೇದ ಔಷಧ ಪ್ರಯೋಗಕ್ಕೆ ಅನುಮತಿ ನೀಡುವುದು ಸಾಧ್ಯವಿಲ್ಲ ಎಂದು ಈ ಮೂಲಗಳು ತಿಳಿಸಿವೆ.

ಐಸಿಎಂಆರ್ ಕೂಡ ಇಂತಹ ಯಾವುದೇ ಆಯುರ್ವೇದ ಔಷಧ ಪ್ರಯೋಗಕ್ಕೆ ಡಾ. ಗಿರಿಧರ್ ಕಜೆ ಅಥವಾ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿಲ್ಲ ಎನ್ನಲಾಗಿದೆ. ಈ ವಿಷಯದಲ್ಲಿ ಸಂಪೂರ್ಣವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ಐಸಿಎಂಆರ್ ಹೇಳಿದೆ.

ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಡಾ. ಗಿರಿಧರ್ ಕಜೆ ಅವರ ನಡುವಿನ ಸಭೆಯ ಬಳಿಕ ಈ ಆಯುರ್ವೇದ ಔಷಧ ಪ್ರಯೋಗಕ್ಕೆ ಅನುಮತಿ ನೀಡಿರುವುದು ರಾಜ್ಯದ ಕೋವಿಡ್ 19 ರೋಗಿಗಳ ಜೀವದ ಜೊತೆ ಚೆಲ್ಲಾಟವಾಡಿದಂತೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಮೊದಲ ಹಂತದ ಪ್ರಯೋಗ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದ್ದು ಆಯುರ್ವೇದಿಕ್ ಗುಳಿಗೆಗಳನ್ನು ಹತ್ತು ಕೋವಿಡ್ 19 ರೋಗಿಗಳಿಗೆ ನೀಡಿ ಪರೀಕ್ಷಿಸಲಾಗುತ್ತದೆ ಎಂದು ಡಾ. ಗಿರಿಧರ್ ಕಜೆ ಹೇಳಿದ್ದಾರೆ. ಆದರೆ ಇದೊಂದು ಕಾನೂನುಬಾಹಿರ ಪ್ರಯೋಗವಾಗಿದ್ದು ದೇಶದ ಸರ್ವೋಚ್ಛ ನ್ಯಾಯಾಲಯವೂ ಸಹ ಕೋವಿಡ್ 19 ರೋಗಿಗಳಿಗೆ ಆಯುರ್ವೇದ, ಯುನಾನಿ, ಹೋಮಿಯೊಪಥಿ ಪ್ರಯೋಗಗಳಿಗೆ ಅನುಮತಿ ನೀಡಬೇಕೆಂಬ ಅರ್ಜಿಯನ್ನು ತಿರಸ್ಕರಿಸಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆಯುಷ್ ಇಲಾಖೆ ಕೂಡ ಡಾ. ಕಜೆ ಅವರಿಗೆ ನೊಟೀಸ್ ನೀಡಿದೆ ಎನ್ನಲಾಗಿದ್ದು ಡಾ. ಕಜೆ ಅದನ್ನು ನಿರಾಕರಿಸಿದ್ದಾರೆ.

Get real time updates directly on you device, subscribe now.