ಎಲ್ಲರೂ ಸಮಾನರು. ಕೆಲವರು ಹೆಚ್ಚು ಸಮಾನರು: ಲಾಕ್ ಡೌನ್ ನಡುವೆ ನಿಖಿಲ್ ಮದುವೆ!

ರಾಜ್ಯದಾದ್ಯಂತ ಲಾಕ್ ಡೌನ್ ಇದ್ದರೂ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿಯ ಮದುವೆ ಇಂದು ಶುಕ್ರವಾರ

ಬೆಂಗಳೂರು: ರಾಜ್ಯದಾದ್ಯಂತ ಲಾಕ್ ಡೌನ್ ಇದ್ದರೂ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿಯ ಮದುವೆ ಇಂದು ಶುಕ್ರವಾರ (ಏ.17) ಬಿಡದಿ ಸಮೀಪದಲ್ಲಿರುವ ಕೇತಗಾನಹಳ್ಳಿಯಲ್ಲಿನ ಫಾಮ್‌ಹೌಸ್‌ನಲ್ಲಿ ನಡೆಯಲಿದೆ. ಸೋಮವಾರ ನಿಖಿಲ್ ಕುಮಾರಸ್ವಾಮಿ-ರೇವತಿ ಅವರ ನಿಶ್ಚಿತಾರ್ಥ ತಾಜ್ ವೆಸ್ಟ್ ಎಂಡ್ ಹೊಟೇಲ್‌ನಲ್ಲಿ ನಡೆದಿತ್ತು.

ರಾಜ್ಯದಾದ್ಯಂತ ಜನಸಾಮಾನ್ಯರು ತಮ್ಮ ಮನೆಗಳಲ್ಲಿ ನಡೆಯಬೇಕಾದ ಮದುವೆ ಮುಂತಾದ ಸಮಾರಂಭಗಳನ್ನು ಮುಂದೂಡಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಸಿದ್ಧ ಜಾತ್ರೆಗಳೂ ಸಹ ನಡೆಯುತ್ತಿಲ್ಲ. ಮಂದಿರ-ಮಸೀದಿ-ಚರ್ಚ್‌ಗಳಲ್ಲಿ ಪೂಜೆ ಪ್ರಾರ್ಥನ್ಗೂ ಅವಕಾಶವಿಲ್ಲ. ಇಂತಹ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಜವಾಬ್ದಾರಿ ಮೆರೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಒಳಗಾಗಿದೆ.

ರಾಜ್ಯದ ಪೊಲೀಸ್ ಪಡೆ ಕೊರೋನಾ ಲಾಕ್ ಡೌನ್ ನಿರ್ವಹಣೆಯಲ್ಲಿ ಹೈರಾಣಾಗಿರುವುದು ಒಂದೆಡೆಯಾದರೆ ಇಂದು ನಿಖಿಲ್ ಮದುವೆಯ ಸುರಕ್ಷತೆಯ ಹೆಚ್ಚುವರಿ ಹೊಣೆ ಪೊಲೀಸರ ಮೇಲೆ ಬಿದ್ದಿದೆ. ಬಿಡದಿ ಬಳಿ ನಡೆಯಲಿರುವ ಮದುವೆ ಫಾರ್ಮ್ ಹೌಸ್‌ನಿಂದ ಅರ್ಧ ಕಿಲೊಮೀಟರ್ ದೂರದ ವರೆಗೂ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಒಟ್ಟು 42 ಕಾರುಗಳಿಗೆ ಫಾರ್ಮ್ ಹೌಸ್ ಒಳಗೆ ಪ್ರವೇಶ ನೀಡಲಾಗಿದ್ದು ಪಾಸ್ ಇದ್ದವರು ಮಾತ್ರ ಫಾರ್ಮ್ ಹೌಸ್ ಪ್ರವೇಶಿಸಬಹುದಾಗಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗನ ಮದುವೆ ಅನುಮತಿ ಹೇಗೆ ಸಿಕ್ಕಿತು ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಪ್ರಶ್ನಿಸುತ್ತಿದ್ದಾರೆ. ಹೀಗೆ ಪೊಲೀಸ್ ಬಂದೋಬಸ್ತಿನಲ್ಲಿ ಜನ ಸಾಮಾನ್ಯರ ಮದುವೆಗೂ ಸರ್ಕಾರ ಅವಕಾಶ ನೀಡಲಿದೆಯೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಮೂಂದೂಡಿ ಲಾಕ್ ಡೌನ್ ಬಳಿಕ ಮದುವೆ ಏರ್ಪಡಿಸಿ ಕುಮಾರಸ್ವಾಮಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೊನೆಗೂ ಎಲ್ಲರೂ ಸಮಾನರು, ಆದರೆ ಕೆಲವರು ಹೆಚ್ಚು ಸಮಾನರು ಎಂಬ ಮಾತು ಕುಮಾರಸ್ವಾಮಿ ಅವರ ವಿಷಯದಲ್ಲಿ ನಿಜವಾಗಿದೆ. ಸಾಮಾನ್ಯ ಜನ ಮನೆಯಿಂದ ಹೊರಗೆ ಬಂದರೆ ಕಂಡಲ್ಲಿ ಲಾಠಿ ಬೀಸುವ, ವಾಹನ ಸೀಝ್ ಮಾಡುವ ಸರ್ಕಾರ ಇನ್ನೊಂದೆಡೆ ರಾಜ್ಯದ ರಾಜಕೀಯದಲ್ಲಿ ಬಲಾಢ್ಯವಾಗಿರುವ ಕುಟುಂಬವೊಂದಕ್ಕೆ ಇದೆಲ್ಲದರಿಂದ ವಿನಾಯಿತಿ ನೀಡಿ ಮದುವೆಗೆ ಭದ್ರತೆಯನ್ನೂ ಒದಗಿಸುತ್ತಿದೆ ಎನ್ನುವುದು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿ. ಅಲ್ಲವೆ?

Get real time updates directly on you device, subscribe now.