ಪ್ಲ್ಯಾನ್ ಇಲ್ಲದ ಲಾಕ್ ಡೌನ್. ಕಾರ್ಮಿಕರ ಜೀವಕ್ಕೆ ಕಿಮ್ಮತ್ತೇ ಇಲ್ಲ: ರೈಲು ಹರಿದು 17 ಕಾರ್ಮಿಕರು ಸಾವು

ಮಹಾರಾಷ್ಟ್ರದ ಜಾಲ್ನಾದಲ್ಲಿ ಕಬ್ಬಿಣ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಲಾಕ್ ಡೌನ್ ಬಳಿಕ ಅತಂತ್ರರಾಗಿದ್ದರು.

ಔರಂಗಾಬಾದ್ (ಮಹಾರಾಷ್ಟ್ರ): ಲಾಕ್ ಡೌನ್ ವೇಳೆ ಅತಂತ್ರರಾಗಿ ದಿಕ್ಕು ತೋಚದೆ ತಮ್ಮ ಮನೆಗಳತ್ತ ನಡೆದುಕೊಂಡೇ ಹೊರಟಿದ್ದ ಕಾರ್ಮಿಕರ ಮೇಲೆ ರೈಲು ಹರಿದು ಕನಿಷ್ಟ 17 ಮಂದಿ ಕಾರ್ಮಿಕರು ಮೃತರಾಗಿದ್ದಾರೆ. ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದ ಜಾಲ್ನಾದಲ್ಲಿ ಕಬ್ಬಿಣ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಲಾಕ್ ಡೌನ್ ಬಳಿಕ ಅತಂತ್ರರಾಗಿದ್ದರು. ಊಟ ವಸತಿಗೂ ತತ್ವಾರವಾಗಿ ಕೊನೆಯದಾಗಿ ಜಾಲ್ನಾದಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆಯಲ್ಲೇ ತೆರಳು ತೀರ್ಮಾನಿಸಿ ನಡಿಗೆ ಪ್ರಯಾಣ ಆರಂಭಿಸಿದ್ದರು.

ಈ ನಡುವೆ ಕಾರ್ಮಿಕರಿಗಾಗಿ ವಿಶೇಷ ರೈಲು ಸಿಗಬಹುದು ಎಂಬ ಆಸೆಯಲ್ಲಿ ಜಾಲ್ನಾದಿಂದ ಭುವಸರ್ ಎಂಬಲ್ಲಿಗೆ ತೆರಳಿ ಅಲ್ಲಿಂದ ಮಧ್ಯಪ್ರದೇಶಕ್ಕೆ ರೈಲು ಪ್ರಯಾಣ ಮಾಡಬೇಕೆಂದು ಸುಮಾರು 45 ಕಿಲೊಮೀಟರ್ ದೂರವನ್ನು ಕ್ರಮಿಸಿ ಬಂದಿದ್ದರು. ಈ ನಡುವೆ ರಾತ್ರಿ ಕಳೆಯಲು ರೈಲು ಹಳಿಗಳ ಮೇಲೆಯೆ ಕಾರ್ಮಿಕರು ಮಲಗಿದ್ದರು. ಈ ವೇಳೆ ಬಂದ ಗೂಡ್ಸ್ ರೈಲು ಕಾರ್ಮಿಕರ ಮೇಲೆ ಹರಿದು 17 ಮಂದಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋವಿಡ್ 19 ನಿಯಂತ್ರಣಕ್ಕಾಗಿ ದೇಶದಾದ್ಯಂತ ಘೋಷಿಸಲಾದ ಲಾಕ್ ಡೌನ್‌ನಿಂದ ದೇಶದ ಕೋಟ್ಯಂತರ ವಲಸೆ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಊಟ, ವಸತಿ ಕೂಡ ಲಭ್ಯವಿಲ್ಲದೆ ಲಕ್ಷಾಂತರ ಕಾರ್ಮಿಕರು ನೂರಾರು, ಸಾವಿರಾರು ಕಿಲೊಮೀಟರ್ ನಡೆದುಕೊಂಡು ಮನೆಯತ್ತ ಹೊರಟಿದ್ದಾರೆ. ಒಂದು ಅಮ್ದಾಜಿಮ ಪ್ರಕಾರ ಮಾರ್ಗ ಮಧ್ಯದಲ್ಲಿ ಬಳಲಿಕೆಯಿಂದ 400ಕ್ಕೂ ಹೆಚ್ಚು ಮಂದು ಕಾರ್ಮಿಕರು ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತಗಲಲ್ಲಿ ಮುನ್ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಈ ದುರಂತವು ಕಾರ್ಮಿಕರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಸರ್ಕಾರಗಳು ಮಾತ್ರ ಕಣ್ಣುಮುಚ್ಚಿ ಕೂತು ಕಾರ್ಮಿಕರ ಬವಣೆಗೆ ಸ್ಪಂದಿಸುತ್ತಲೇ ಇಲ್ಲ ಎಂಬ ಆಕ್ರೋಶ ಎಲ್ಲೆಡೆ ವ್ಯಕ್ತವಾಗುತ್ತಿದೆ.

Get real time updates directly on you device, subscribe now.