ಕುಂದಾಪುರ: ಅಮಾಸೆಬೈಲು ಠಾಣೆಗೆ ಭದ್ರತೆಗೆ ನಿಯೋಜಿತರಾಗಿದ್ದ  ಆರ್.ಎಸ್ಸೈ ಆತ್ಮಹತ್ಯೆ

ವರ್ಗಾವಣೆ ಬಯಸಿದ್ದರೂ ಆದೇಶ ಬಾರದಿರುವ ಬಗ್ಗೆ ಮಲ್ಲಿಕಾರ್ಜುನ್ ಗುಬ್ಬಿ ತೀವೃ ಬೇಸರಗೊಂಡಿದ್ದರು ಎನ್ನಲಾಗುತ್ತಿದೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಅಮಾಸೆಬೈಲು ಠಾಣೆಯ ಭದ್ರತೆಗೆ ನಿಯೋಜಿತರಾಗಿದ್ದ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಆರ್.ಎಸ್ಸೈ ಇಂದು ಬೆಳಿಗ್ಗೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ.

ಡೈರಿಗೆ ಹಾಲು ಪೂರೈಸುವ ವ್ಯಕ್ತಿಯೋರ್ವರಿಂದ ಕಲ್ಬುರ್ಗಿಯ ನೌರಾಗುಂಜ್‌ ನಿವಾಸಿಯಾದ ಮಲ್ಲಿಕಾರ್ಜುನ್ ಗುಬ್ಬಿ(56) ಅವರು ಆತ್ಮಹತ್ಯೆಗೈದ ಸಂಗತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಈ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಮೆ.16ರಂದು ಅಮಾಸೆಬೈಲು ಠಾಣೆಗೆ ಭದ್ರತೆಗಾಗಿ ನಿಯೋಜಿತರಾಗಿದ್ದ ಮಲ್ಲಿಕಾರ್ಜುನ್ ಅವರು ರಾತ್ರಿ ಮಲಗಿದವರು ಬೆಳಿಗ್ಗೆ ಇಲ್ಲದಿರುವುದನ್ನು ನೋಡಿದ ಸಿಬಂದಿ ಸಮೀಪದಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆ ಬಳಿಕ ಡೈರಿಗೆ ಹಾಲು ಕೊಡುವ ವ್ಯಕ್ತಿಯಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಪತ್ನಿ ಮತ್ತು ಮೂವರು ಮಕ್ಕಳನ್ನು ಮಲ್ಲಿಕಾರ್ಜುನ್ ಗುಬ್ಬಿ ಅಗಲಿದ್ದಾರೆ.

ಮೂರು ತಿಂಗಳ ಹಿಂದೆ ಕೊಪ್ಪಳದ ಮುನೀರಾಬಾದ್‌ಗೆ ವರ್ಗಾವಣೆಗೊಂಡಿದ್ದ ಮಲ್ಲಿಕಾರ್ಜುನ್ ಅವರನ್ನು ಹದಿನೈದು ದಿನಗಳಿಗೊಮ್ಮೆ ನಕ್ಸಲ್ ಏರಿಯಾಗಳಿಗೆ ಸಿಬಂದಿಗಳನ್ನು ನಿಯೋಜನೆ ಮಾಡುವ ಹಿನ್ನೆಲೆಯಲ್ಲಿ ಅಮಾಸೆಬೈಲು ಠಾಣೆಗೆ ಭದ್ರತೆಗೆ ನಿಯೋಜಿಸಲಾಗಿತ್ತು. ಶನಿವಾರ ಅವರು ಇಲ್ಲಿಂದ ಮುನೀರಾಬಾದ್‌ಗೆ ಮರಳುವವರಿದ್ದರು.

ವರ್ಗಾವಣೆ ಬಯಸಿದ್ದರೂ ಆದೇಶ ಬಾರದಿರುವ ಬಗ್ಗೆ ಮಲ್ಲಿಕಾರ್ಜುನ್ ಗುಬ್ಬಿ ತೀವೃ ಬೇಸರಗೊಂಡಿದ್ದರು ಎನ್ನಲಾಗುತ್ತಿದೆ. ಇಪ್ಪತ್ತೊಂಬತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ್ ಯಾಕೆ ಆತ್ಮಹತ್ಯೆಯ ನಿರ್ಧಾರ ಕೈಗೊಂಡರು ಎಂಬ ಬಗ್ಗೆ ಇನ್ನಷ್ಟೇ ತನಿಖೆಯಿಂದ ತಿಳಿಯಬೇಕಿದೆ.

ಜಿಲ್ಲಾ ಪೊಲೀಸ್ ವರಿಷ್ಥಾಧಿಕಾರಿ ವಿಷ್ಣುವರ್ಧನ್ , ಅಮಾಸೆಬೈಲು ಪಿಎಸ್ಸೈ ಅನಿಲ್ ಕುಮಾರ್, ಆರ್.ಎಸ್ಸೈ ದುರ್ಗಪ್ಪ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Get real time updates directly on you device, subscribe now.