ಹೊನ್ನಾವರ: ಯಕ್ಷ ದಿಗ್ಗಜ ‘ನಾಣಿ ಹಾಸ್ಯಗಾರ’ ಇನ್ನಿಲ್ಲ

ಹಿರಿಯ ಯಕ್ಷಗಾನ ಕಲಾವಿದ  ನಾರಾಯಣ ಹಾಸ್ಯಗಾರ ಕರ್ಕಿ (90) ಅವರು ತಮ್ಮ ಮನೆಯಲ್ಲಿ  ನಿಧನ ಹೊಂದಿದ್ದಾರೆ.

ಕೃಷ್ಣಾರ್ಜುನ, ಚಂದ್ರಾವಳಿ ವಿಲಾಸ, ಶ್ಯಮಂತಕ ರತ್ನ, ಶ್ರೀ ಕೃಷ್ಣ ಪಾರಿಜಾತ ಮುಂತಾದ ಪ್ರಸಂಗಗಳಲ್ಲಿ ಕೃಷ್ಣನ ಪಾತ್ರಕ್ಕೆ ನಾಣಿ ಹಾಸ್ಯಗಾರರು ಪ್ರಸಿದ್ಧರಾಗಿದ್ದರು.

ಕರಾವಳಿ ಕರ್ನಾಟಕ ವರದಿ
ಹೊನ್ನಾವರ:  ಹಿರಿಯ ಯಕ್ಷಗಾನ ಕಲಾವಿದ  ನಾರಾಯಣ ಹಾಸ್ಯಗಾರ ಕರ್ಕಿ (90) ಅವರು ತಮ್ಮ ಮನೆಯಲ್ಲಿ  ನಿಧನ ಹೊಂದಿದ್ದಾರೆ.

ಪತ್ನಿ, ಪುತ್ರ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ.

ಯಕ್ಷಗಾನ ಕ್ಷೇತ್ರದಲ್ಲಿ ನಾಣಿ ಹಾಸ್ಯಗಾರ ಎಂದೇ ಪ್ರಸಿದ್ಧರಾಗಿದ್ದ ನಾರಾಯಣ ಹಾಸ್ಯಗಾರರು ‘ಕರ್ಕಿ ಹಾಸ್ಯಗಾರ ಮೇಳ’ದ ಪ್ರಸಿದ್ಧ ಕಲಾವಿದರಾಗಿದ್ದರು. ಕರ್ಕಿ ಹಾಸ್ಯಗಾರ ಮೇಳವು 1974ರಲ್ಲಿ ಬಿಬಿಸಿ ವಾಹಿನಿಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ ಮೊದಲ ಮೇಳ ಎಂಬ ಖ್ಯಾತಿ ಹೊಂದಿತ್ತು.

ನಾರಾಯಣ ಹಾಸ್ಯಗಾರರಿಗೆ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಪ್ರದಾನವಾಗಿದೆ.

ಕೃಷ್ಣಾರ್ಜುನ, ಚಂದ್ರಾವಳಿ ವಿಲಾಸ, ಶ್ಯಮಂತಕ ರತ್ನ, ಶ್ರೀಕೃಷ್ಣ ಪಾರಿಜಾತ ಮುಂತಾದ ಪ್ರಸಂಗಗಳಲ್ಲಿ ಕೃಷ್ಣನ ಪಾತ್ರಕ್ಕೆ ನಾಣಿ ಹಾಸ್ಯಗಾರರು ಪ್ರಸಿದ್ಧರಾಗಿದ್ದರು.

ನಾರಾಯಣ ಹಾಸ್ಯಗಾರರು ಸ್ತ್ರೀ ಪಾತ್ರ ಹಾಗೂ ಬಣ್ಣದ ವೇಷಗಳನ್ನು ಮಾಡಿದ್ದನ್ನೂ ಅಭಿಮಾನಿಗಳು ನೆನೆಯುತ್ತಾರೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅವರ ಬಬ್ರುವಾಹನ, ಅಭಿಮನ್ಯು, ಸುಧನ್ವ, ಅರ್ಜುನ, ರಾಮ, ಲಕ್ಷ್ಮಣ, ವಾಲಿ, ಕೀಚಕ, ಶಿವನ ಪಾತ್ರಗಳನ್ನು ಇಂದಿಗೂ ನೆನಪಿಸಿಕೊಳ್ಳುವ ಕಲಾಭಿಮಾನಿಗಳು ಇದ್ದಾರೆ.

ಶಿಕ್ಷಕರಾಗಿಯೂ ಸೇವೆ

ಎಸ್.ಎಸ್.ಎಲ್.ಸಿ. ಶಿಕ್ಷಣ ಪಡೆದಿದ್ದ ನಾರಾಯಣ ಹಾಸ್ಯಗಾರರು ಒಂದು ವರ್ಷ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು.

ಎರಡು ವರ್ಷ ಕೋಟ ಶಿವರಾಮ ಕಾರಂತರಲ್ಲಿ , ಎರಡು ವರ್ಷ ಕುಷ್ಟ ಗಾಣಿಗರ ಬಳಿ ಬಡಗುತಿಟ್ಟಿನ ಯಕ್ಷಗಾನ ಅಭ್ಯಾಸವನ್ನು ಮಾಡಿದ್ದರು.

 

Get real time updates directly on you device, subscribe now.