ಅಬ್ಬಬ್ಬ ಇದೆಂತಹ ಕ್ರೌರ್ಯ! ಲಾಕ್ ಡೌನ್ ಉಲ್ಲಂಘಿಸಿದರೆಂದು ತಂದೆ-ಮಗನನ್ನು ಚಿತ್ರಹಿಂಸೆ ನೀಡಿ ಕೊಂದ ತಮಿಳುನಾಡು ಪೊಲೀಸ್

ತಮಿಳುನಾಡಿನ ತೂತ್ತುಕುಡಿಯಲ್ಲಿ ನಡೆದಿರುವ ಪೊಲೀಸ್ ದೌರ್ಜನ್ಯವನ್ನು ನೀವು ಊಹಿಸಲೂ ಸಾಧ್ಯವಿಲ್ಲ.

ಕಸ್ಟಡಿಯಲ್ಲಿದ್ದಾಗ ಪೊಲೀಸರ ಹಿಂಸೆ, ಲೈಂಗಿಕ ದೌರ್ಜನ್ಯದಿಂದ ಅವರು ಸತ್ತಿದ್ದಾರೆಂದು ಆರೋಪಿಸಲಾಗಿದ್ದು ತಮಿಳುನಾಡಿನ ಜನ ರೊಚ್ಚಿಗೆದ್ದಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಚೆನ್ನೈ: ಲಾಕ್ ಡೌನ್ ವೇಳೆ ಅಂಗಡಿ ತೆರೆದಿದ್ದರು ಎಂದರೆ ಹೆಚ್ಚೆಂದರೆ ಏನು ಶಿಕ್ಷೆಯಾಗಬಹುದು? ತಮಿಳುನಾಡಿನ ತೂತ್ತುಕುಡಿಯಲ್ಲಿ ನಡೆದಿರುವ ಪೊಲೀಸ್ ದೌರ್ಜನ್ಯವನ್ನು ನೀವು ಊಹಿಸಲೂ ಸಾಧ್ಯವಿಲ್ಲ. ತಂದೆ-ಮಗ ಲಾಕ್ ಡೌನ್ ವೇಳೆ ತಮ್ಮ ಮೊಬೈಲ್ ಅಕ್ಸೆಸರಿಗಳ ಅಂಗಡಿಯನ್ನು ತೆರೆದಿದ್ದಾರೆ ಎಂದು ತೂತ್ತುಕುಡಿಯ ರಾಕ್ಷಸ ಪೊಲೀಸರು ಇಬ್ಬರನ್ನೂ ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ. ಈ ಪ್ರಕರಣ ಇದೀಗ ತಮಿಳುನಾಡು ಸೇರಿದಂತೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಪೊಲೀಸ್ ಹಿಂಸೆಗೆ ಬಲಿಯಾದ ತಂದೆ ಜಯರಾಜ್ ಮತ್ತು ಅವರ ಮಗ ಜೆ ಬೆನ್ನಿಕ್ಸ್ (ಫೆನ್ನಿಕ್ಸ್). ಇಬ್ಬರ ಅಪರಾಧ ಎಂದರೆ ಲಾಕ್ ಡೌನ್ ಸಮಯದಲ್ಲಿ ತಮ್ಮ ಮೊಬೈಲ್ ಅಕ್ಸೆಸರಿಗಳ ಅಂಗಡಿಯನ್ನು ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಸಮಯಕ್ಕೆ ತೆರೆದಿಟ್ಟಿದ್ದರು. ಇಬ್ಬರನ್ನೂ ಪ್ರಶ್ನಿಸಲೆಂದು ಸಾತಂಕುಲಮ್ ಪೊಲೀಸ್ ಸ್ಟೇಶನ್‌ನ ಸಿಬ್ಬಂದಿ ಠಾಣೆಗೆ ಕೊಂಡೊಯ್ಯುತ್ತಾರೆ. ಜೂನ್ 19 ರಂದು ಠಾಣೆಯಲ್ಲಿ ಈ ತಂದೆ-ಮಗನ ಮೇಲೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಬಳಿಕ ನಡೆದಿದ್ದು ಮನುಕುಲವೇ ಬೆಚ್ಚಿ ಬೀಳುವಂತಹ ಚಿತ್ರ ಹಿಂಸೆ.

ಜೂನ್ 19 ರ ರಾತ್ರಿಯಿಂದ ಜಯರಾಜ್ ಮತ್ತು ಬೆನ್ನಿಕ್ಸ್ ಮೇಲೆ ಪೊಲೀಸರು ಮುಗಿ ಬೀಳುತ್ತಾರೆ. ರಾತ್ರಿ ಇಡೀ ದೊಣ್ಣೆಗಳಿಂದ ಹೊಡೆಯುತ್ತಾರೆ. ಇಬ್ಬರನ್ನೂ ಸಂಪೂರ್ಣ ನಗ್ನರಾಗಿಸುತ್ತಾರೆ. ಇಡೀ ಮೈಯ್ಯ ಚರ್ಮವೆಲ್ಲ ಕಿತ್ತು ಹೋಗುವಷ್ಟು ಹೊಡೆಯುತ್ತಾರೆ. ಇಬ್ಬರೂ ರಕ್ತದ ಮಡುವಿನಲ್ಲಿ ಕುಸಿದು ಬೀಳುತ್ತಾರೆ. ಆ ರಾತ್ರಿ ಎಲ್ಲ ಸಾತಂಕುಲಂ ಪೊಲೀಸ್ ಠಾಣೆಯ ಸುತ್ತಮುತ್ತ ಅಪ್ಪ-ಮಗನ ಆಕ್ರಂದನ, ಚೀತ್ಕಾರ ಕೇಳುತ್ತಿರುತ್ತದೆ.

ಇಷ್ಟೇ ಸಾಲದು ಎಂಬಂತೆ ಪೊಲೀಸರು ಈ ಅಪ್ಪ-ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಾರೆ. ಬಾರಿ ಬಾರಿ ಇಬ್ಬರ ಗುದದ್ವಾರಕ್ಕೆ ಲಾಠಿಯಿಂದ ತಿವಿಯುತ್ತಾರೆ. ಅದೆಷ್ಟು ಭೀಕರವಾಗಿತ್ತೆಂದರೆ ಇಬ್ಬರ ಗುದದ್ವಾರದಿಂದ ರಕ್ತ ನಿರಂತರವಾಗಿ ಸೋರುತ್ತಿರುತ್ತದೆ.

ಸ್ಥಳೀಯ ಮ್ಯಾಜಿಸ್ಟ್ರೇಟ್ ಒಬ್ಬರೂ ಸಹ ಪೊಲೀಸರ ಈ ಕ್ರೌರ್ಯಕ್ಕೆ ಸಾಥ್ ನೀಡುವಂತೆ ವರ್ತಿಸುತ್ತಾರೆ. ಇಬ್ಬರೂ ಆರೋಪಿಗಳನ್ನು ತನ್ನ ಮುಂದೆ ಹಾಜರುಪಡಿಸದೆ ಇದ್ದರೂ ಇಬ್ಬರಿಗೂ ಪೊಲೀಸ್ ಕಸ್ಟಡಿ ವಿಧಿಸುತ್ತಾರೆ. ಜೈಲಿಗ ಬರುವ ಮೊದಲು ಅಪ್ಪ-ಮಗ ಏಳು ಬಾರಿ ಲುಂಗಿ ಬದಲಾಯಿಸಿರುತ್ತಾರೆ. ಅದಕ್ಕೆ ಕಾರಣ ಇಬ್ಬರ ಗುದದ್ವಾರದಿಂದ ಸುರಿಯುತ್ತಿದ್ದ ರಕ್ತ. ಮನೆಯಿಂದ ಮೂರು ಬಾರಿ ತರಿಸಿಕೊಂಡ ಬಟ್ಟೆಗಳೆಲ್ಲವೂ ರಕ್ತಮಯ. ಮೈ ತುಂಬಾ ಎಲ್ಲಿ ಕಂಡರೂ ಗಾಯ. ಜೈಲಿಗೆ ಬಂದಾಗ ಇಬ್ಬರೂ ರಕ್ತದ ಮಡುವಿನಲ್ಲಿದ್ದರು ಎಂದು ಜೈಲರ್ ಕೂಡ ಹೇಳಿದ್ದಾರೆ.

ಜೂನ್ 20 ರ ರಾತ್ರಿ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗುತ್ತದೆ. ಜೂನ್ 22 ರಂದು ಮಗ ಬೆನ್ನಿಕ್ಸ್ ಸಾವಿಗೀಡಾಗುತ್ತಾರೆ. ಮರು ದಿನ ತಂದೆ ಜಯರಾಜ್ ಸಾವಿಗೀಡಾಗುತ್ತಾರೆ. ಕಸ್ಟಡಿಯಲ್ಲಿದ್ದಾಗ ಪೊಲೀಸರ ಹಿಂಸೆ, ಲೈಂಗಿಕ ದೌರ್ಜನ್ಯದಿಂದ ಅವರು ಸತ್ತಿದ್ದಾರೆಂದು ಆರೋಪಿಸಲಾಗಿದ್ದು ತಮಿಳುನಾಡಿನ ಜನ ರೊಚ್ಚಿಗೆದ್ದಿದ್ದಾರೆ.

ತಮಿಳುನಾಡಿನಲ್ಲಿ ಹಲವೆಡೆ ಪ್ರತಿಭಟನೆ ನಡೆಯುತ್ತಿದ್ದು ಚಿತ್ರನಟಿ ಖುಷ್ಬೂ ಸೇರಿದಂತೆ ಹಲವಾರು ಗಣ್ಯರು ಜೊತೆಗೆ ದೇಶದಾದ್ಯಂತದ ಹಲವು ಪ್ರಮುಖರ್, ನಾಗರಿಕರು ಪೊಲೀಸರ ಈ ಪೈಶಾಚಿಕ ಕೃತ್ಯವನ್ನು ಖಂಡಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ‘ಕರಾವಳಿ ಕರ್ನಾಟಕ’ ಕೂಡ ಇಬ್ಬರ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸುತ್ತಿದೆ.

Get real time updates directly on you device, subscribe now.