ಕೋಲಾರ: ಕಿರೀಟ, ಬೆಳ್ಳಿಗಧೆ, ಚಿನ್ನದ ಉಂಗುರ ಉಡುಗೊರೆ. ಉಡುಪಿ ಡಿಸಿ ಜಗದೀಶ್ ವಿರುದ್ಧ ಎಫ್.ಐ.ಆರ್

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅನ್ವಯ ತನಿಖೆ ನಡೆಸಿ ಆಗಸ್ಟ್ ತಿಂಗಳ ಒಳಗೆ ವರದಿ ನೀಡಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶಿಸಿದೆ.

ಈ ಹಿಂದೆ ಈ ರೀತಿ ಆರೋಪ ಬಂದಿದ್ದಾಗ ಪಿಡಿಒ ಸಂಘದ ಸುದ್ದಿಗೋಷ್ಠಿಯಲ್ಲಿ ನಿರ್ಗಮಿತ ಸಿಇಒಗೆ ಬಾಡಿಗೆ ಬೆಳ್ಳಿ ಗಧೆ, ಕಿರೀಟ ನೀಡಿ ಸನ್ಮಾನ ಮಾಡಿದ್ದಾಗಿ ಹೇಳಿದ್ದನ್ನು ಸ್ಮರಿಸಬಹುದು.

ಕರಾವಳಿ ಕರ್ನಾಟಕ ವರದಿ
ಕೋಲಾರ: ಜಿಲ್ಲೆಯ ನಿರ್ಗಮಿತ ಜಿಪಂ ಸಿಇಒ, ಪ್ರಸ್ತುತ ಉಡುಪಿ ಜಿಲ್ಲಾಧಿಕಾರಿಯಾಗಿರುವ ಜಗದೀಶ್ ಅವರಿಗೆ ಬೆಳ್ಳಿಗಧೆ, ಕಿರೀಟ, ಚಿನ್ನದ ಉಂಗುರ ಬೀಳ್ಕೊಡುಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಜಗದೀಶ್ ಸೇರಿದಂತೆ ತಾಪಂ ಇಒ ಮತ್ತು ಒಂಬತ್ತು ಮಂದಿ ಗ್ರಾಪಂ ಪಿಡಿಓಗಳ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.

ಕೋಲಾರ ಜಿಪಂ ಸಭಾಂಗಣದಲ್ಲಿ ಆಗಸ್ಟ್23,2019ರಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅನ್ವಯ ತನಿಖೆ ನಡೆಸಿ ಆಗಸ್ಟ್ ತಿಂಗಳ ಒಳಗೆ ವರದಿ ನೀಡಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶಿಸಿದೆ.

ಕೋಲಾರದ ಎಸ್. ನಾರಾಯಣ ಸ್ವಾಮಿ ಎಂಬವರು ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಅಕ್ರಮ ಸಂಭಾವನೆ ಮೂಲಕ ನಿರ್ಗಮಿತ ಅಧಿಕಾರಿಗೆ ಬೀಳ್ಕೊಡುಗೆ ನೀಡಲಾಗಿದೆ ಎಂದು ದಾಖಲೆ ಸಹಿತ ದೂರು ನೀಡಿದ್ದರು. ಜೂ.17ರಂದು ಜಿಲ್ಲಾ ನ್ಯಾಯಾಲಯಕ್ಕೆ  ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು.

ನಿರ್ಗಮಿತ ಜಿಪಂ ಸಿಇಒ ಜಗದೀಶ್, ಪಿಡಿಓಗಳಾದ ಕೆ.ಮಹೇಶ್ ಕುಮಾರ್, ಪಿ.ನಾರಾಯಣಪ್ಪ, ಎಂ.ರಾಮಕೃಷ್ಣ, ವಿ. ಶಂಕರ್, ಎನ್.ಸಂಪರಾಜ್, ಎಸ್.ಜಿ.ಹರೀಶ್ ಕುಮಾರ್, ಎಂ.ಸೋಮಶೇಖರ್, ಅಶ್ವಥ್ ನಾರಾಯಣ, ಎಂ.ಸುರೇಶ್ ಕುಮಾರ್, ಶ್ರೀನಿವಾಸಪುರ ತಾಪಂ ಇಒ ಎಸ್.ಆನಂದ ವಿರುದ್ಧ ಎಫ್.ಐ.ಆರ್. ದಾಖಲಿಸಿ ಡಿವೈಎಸ್ಪಿ ಎಂ.ಎಲ್.ಪುರುಷೋತ್ತಮ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಜಿ.ಎನ್.ವೆಂಕಟಾಚಲಪತಿ ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ ಈ ರೀತಿ ಆರೋಪ ಬಂದಿದ್ದಾಗ ಪಿಡಿಒ ಸಂಘದ ಸುದ್ದಿಗೋಷ್ಠಿಯಲ್ಲಿ ನಿರ್ಗಮಿತ ಸಿಇಒಗೆ ಬಾಡಿಗೆ ಬೆಳ್ಳಿ ಗಧೆ, ಕಿರೀಟ ನೀಡಿ ಸನ್ಮಾನ ಮಾಡಿದ್ದಾಗಿ ಹೇಳಿದ್ದನ್ನು ಸ್ಮರಿಸಬಹುದು.

Get real time updates directly on you device, subscribe now.