ಉಡುಪಿ ಜಿಲ್ಲೆಯಲ್ಲಿ ಕೊರೋನ ಸಮುದಾಯಕ್ಕೆ ಹರಡಿಲ್ಲ: ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಇದುವರೆಗೆ ಟ್ರಾವೆಲ್ ಹಿಸ್ಟರಿ ಇಲ್ಲದ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ.

ಜಿಲ್ಲೆಯಲ್ಲಿ ರೋಗ ಸಮುದಾಯಕ್ಕೆ ಹರಡದಂತೆ ತಡೆಯಲು ಮನೆಮನೆ ಸರ್ವೆ ನಡೆಯುತ್ತಿದೆ. ಸಾರ್ವಜನಿಕರು ಆತಂಕ ಪಡಬೇಕಿಲ್ಲ. ಎಚ್ಚರಿಕೆ ವಹಿಸಬೇಕಿರುವುದು ಮುಖ್ಯ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಜಿಲ್ಲೆಯಲ್ಲಿ ಇದುವರೆಗೆ ಟ್ರಾವೆಲ್ ಹಿಸ್ಟರಿ ಇಲ್ಲದ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಕೊರೋನಾ ಸಮುದಾಯಕ್ಕೆ ಹರಡಿರುವ ಯಾವುದೇ ಪ್ರಕರಣಗಳಿಲ್ಲ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.

ಮುಂಬೈಯಿಂದ ಪ್ರತೀ ದಿನ 250-300 ಮಂದಿ ರೈಲು ಹಾಗೂ ಇತರ ವಾಹನಗಳ ಮೂಲಕ ಬರುತ್ತಿದ್ದಾರೆ. ಇವರಲ್ಲಿ ವಿಶೇಷ ವರ್ಗ ಮತ್ತು ರೋಗ ಲಕ್ಷಣಗಳಿರುವವರನ್ನು ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಪ್ರತಿದಿನ ಪ್ರಕರಣಗಳು ಕಂಡುಬರುತ್ತಿವೆ ಎಂದರು.

ಹಿಂದೆ ಮಾರ್ಗಸೂಚಿ ಅನ್ವಯ ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೊಳಪಡಿಸಲಾಗುತ್ತಿತ್ತು. ಹೊಸ ಮಾರ್ಗಸೂಚಿ ಪ್ರಕಾರ  ಪರೀಕ್ಷೆಗೆ ಒಳಪಡಿಸಬೇಕಾಗಿಲ್ಲ. ಈಗ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಿದಾಗ ಹಲವು ಮಂದಿಯಲ್ಲಿ  ಸೋಂಕು ಕಂಡುಬರುತ್ತಿದೆ ಎಂದರು. ಪ್ರತಿದಿನ ಐದಾರು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕಿತರು ಸೇರಿದ್ದಾರೆ, ಇವರನ್ನು ಹೊರತುಪಡಿಸಿ ಕೋವಿಡ್  ವಾರಿಯರ್ಸ್‌, ವೈದ್ಯರು ಹಾಗೂ ಪೊಲೀಸರಲ್ಲಿ ಕಂಡುಬಂದಿದೆ ಎಂದು ತಿಳಿಸಿದರು.

ಬಸ್‌ ಚಾಲಕರು ಹಾಗೂ ಜವಳಿ ವ್ಯಾಪಾರಿ ಬೆಂಗಳೂರಿಗೆ ಹೋಗಿ ಬಂದ ಪರಿಣಾಮ ಪಾಸಿಟಿವ್‌ ಬಂದಿದೆ.  ಆದರೆ ಸಮುದಾಯಕ್ಕೆ ಹರಡಿರುವಂತಹ ಯಾವುದೇ ಪ್ರಕರಣಗಳು ಈವರೆಗೆ ಕಂಡುಬಂದಿಲ್ಲ. ಜಿಲ್ಲೆಯಲ್ಲಿ ರೋಗ ಸಮುದಾಯಕ್ಕೆ ಹರಡದಂತೆ ತಡೆಯಲು ಮನೆಮನೆ ಸರ್ವೆ ನಡೆಯುತ್ತಿದೆ. ಉಸಿರಾಟದ ಸಮಸ್ಯೆ, ಜ್ವರ, ಶೀತ ಕೆಮ್ಮು ಇರುವವರನ್ನು ಗುರುತಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಹಾಗಾಗಿ ಸಾರ್ವಜನಿಕರು ಆತಂಕ ಪಡಬೇಕಿಲ್ಲ. ಎಚ್ಚರಿಕೆ ವಹಿಸಬೇಕಿರುವುದು ಮುಖ್ಯ ಎಂದು ಡಿಸಿ ಹೇಳಿದರು.

Get real time updates directly on you device, subscribe now.