ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಸೂಕ್ತ ಸಂಭಾವನೆ ನೀಡಲು ಜಿಲ್ಲಾ ಕಾಂಗ್ರೆಸ್ ಆಗ್ರಹ

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ವಾರ್ಡ್ ಮತ್ತು ಗ್ರಾಮ ಮಟ್ಟದಲ್ಲಿ ಜನರ ನೇರ ಸಂಪರ್ಕದಲ್ಲಿರುವವರು.

ಅವರಿಗೆ ಸೂಕ್ತ ಗೌರವವನ್ನು ನೀಡುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರದ ಜವಾಬ್ದಾರಿ ಹಾಗೂ ಕರ್ತವ್ಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸರಕಾರವನ್ನು ಎಚ್ಚರಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಸೂಕ್ತ ಸಂಭಾವನೆ ನೀಡಲು ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಆಗ್ರಹಿಸಿದ್ದಾರೆ.

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ವಾರ್ಡ್ ಮತ್ತು ಗ್ರಾಮ ಮಟ್ಟದಲ್ಲಿ ಜನರ ನೇರ ಸಂಪರ್ಕದಲ್ಲಿರುವವರು. ಕೋವಿಡ್-19 ಮಹಾಮಾರಿ ಕೊರೋನಾ ವೈರಸ್ ಸೋಂಕು ಯಾರಿಗೆ ತಗುಲಿದೆ ಎಂದು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಸೋಂಕಿತರಿಗೆ ಮುಂದಿನ ಚಿಕಿತ್ಸೆ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವ ಮಹತ್ವದ ಕಾರ್ಯವನ್ನು ಆಶಾ ಕಾರ್ಯಕರ್ತೆಯರು ಮಾಡಿದ್ದಾರೆ.

ಸೋಂಕು ತಗಲುವ ಆತಂಕ ಹಾಗೂ ಭಯ ಇದ್ದರೂ ಅದನ್ನು ಲೆಕ್ಕಿಸದೆ ತಮ್ಮಕಾರ್ಯನಿರ್ವಹಿಸುವ, ಜನರ ಆರೋಗ್ಯಕಾಪಾಡುವ ನಿಜವಾದ ಆರೋಗ್ಯ ರಾಯಭಾರಿಗಳು. ಅವರ ನ್ಯಾಯಯುತವಾದ ಬೇಡಿಕೆಯನ್ನು ಸರಕಾರ ಮನ್ನಿಸಿ ಕೊರೋನಾದ ಈ ಸಂಕಷ್ಟದಲ್ಲಿ ಕಾರ್ಯ ನಿರ್ವಹಿಸಿದ ಎಲ್ಲಾ ಆಶಾ ಕಾರ್ಯಕರ್ತರಿಗೆ ಸೂಕ್ತ ಭತ್ಯೆಯನ್ನು ನೀಡಬೇಕು. ಈ ಮೂಲಕ ಅವರಿಗೆ ಸೂಕ್ತ ಗೌರವವನ್ನು ನೀಡುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರದ ಜವಾಬ್ದಾರಿ ಹಾಗೂ ಕರ್ತವ್ಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸರಕಾರವನ್ನು ಎಚ್ಚರಿಸಿದ್ದಾರೆ.

Get real time updates directly on you device, subscribe now.