ನೇತ್ರಾವತಿ ಸೇತುವೆಯಲ್ಲಿ ಅಪಘಾತ: ಮದುವೆ ನಿಶ್ಚಯವಾಗಿದ್ದ ಉಳ್ಳಾಲದ ಯುವಕ ಸಾವು

ಅಪಘಾತದಲ್ಲಿ ಮೃತಪಟ್ಟ ಉಬೈದ್ ಅವರಿಗೆ ಜು.23ರಂದು ಮದುವೆ ನಿಶ್ಚಯವಾಗಿತ್ತು.

ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಲಾರಿಯಡಿ ಬಿದ್ದು ಸ್ಕೂಟರ್ ಸವಾರ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ರಾ.ಹೆ66ರ ಉಳ್ಳಾಲ ಸೇತುವೆಯಲ್ಲಿ ಇಂದು ಮಧ್ಯಾಹ್ನ ಘಟನೆ ಸಂಭವಿಸಿದ್ದು, ಮೃತರನ್ನು ಉಳ್ಳಾಲ ಬಂಡಿಕೊಟ್ಯ ನಿವಾಸಿ ಉಬೈದ್(28) ಎಂದು ಗುರುತಿಸಲಾಗಿದೆ. ಸಹ ಸವಾರ ಮೊಹ್ಮದ್ ಶಾಕೀರ್(18) ಎಂಬವರು ಗಂಭೀರ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಉಬೈದ್ ಅವರಿಗೆ ಜು.23ರಂದು ಮದುವೆ ನಿಶ್ಚಯವಾಗಿತ್ತು.

ಮಂಗಳೂರಿನಿಂದ ಉಳ್ಳಾಲಕ್ಕೆ ಸ್ಕೂಟರ್‌ನಲ್ಲಿ ಉಬೈದ್ ಅವರು ಶಾಕಿರ್ ಅವರೊಂದಿಗೆ ಹೋಗುತ್ತಿದ್ದಾಗ ಕಾರು ಗುದ್ದಿತ್ತು. ಈ ಸಂದರ್ಭ ರಸ್ತೆಗೆ ಎಸೆಯಲ್ಪಟ್ಟ ಉಬೈದ್ ಅವರ ಮೇಲೆ ಹಿಂದಿನಿಂದ ಬರುತ್ತಿದ್ದ ಮಿನಿ ಲಾರಿ ಚಲಿಸಿದ್ದು, ಉಬೈದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದ. ಆತನ ಕಾರನ್ನು ಬೆಂಬತ್ತಿದ ಜನರು ತೊಕ್ಕೊಟ್ಟು ಮೇಲ್ಸೆತುವೆಯಲ್ಲಿ ಕಾರನ್ನು ತಡೆದು ಚಾಲಕ ಮತ್ತು ಅದರಲ್ಲಿದ್ದ ಪ್ರಯಾಣಿಕರ ಸಹಿತ ಪೊಲೀಸ್ ವಶಕ್ಕೆ ನೀಡಿದ್ದಾರೆ. ಕಾರು ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ ಸೋಮೇಶ್ವರ ಪುರಸಭೆ ವ್ಯವಸ್ಥಾಪಕ ಕೃಷ್ಣ ಮತ್ತು ಮೃತ ಯುವಕನ ಮೇಲೆ ಲಾರಿ ಚಲಾಯಿಸಿದ ಲಾರಿ ಚಾಲಕ ಕಾರ್ಕಳದ ಸುರೇಂದ್ರ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.