ಕೋವಿಡ್ ಹೆಸರಲ್ಲಿ 2000ಕೋಟಿ ಸಚಿವರ ಜೇಬಿಗೆ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಕೊರೊನಾ ಹೆಣದ ಹೆಸರಲ್ಲಿ ಬಿಜೆಪಿಯವರು ದುಡ್ಡು ಮಾಡಲು ಹೊರಟಿದ್ದಾರೆ. ಇದನ್ನು ಸಹಿಸಲಾಗದು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಜನತೆ ಬೀದಿಯಲ್ಲಿ ಹೆಣ ಹೊತ್ತು ತಿರುಗಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಕ್ರಮ ನಡೆಸಲು ಇವರಿಗೆ ನಾಚಿಕೆಯಾಗುವುದಿಲ್ಲವೇ? ಎಂದು ಸಿದ್ದರಾಮಯ್ಯ ಆಕ್ರೋಶ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಕೋವಿಡ್ ನಿರ್ವಹಣೆ ಹೆಸರಲ್ಲಿ ಎರಡು ಸಾವಿರ ಕೋಟಿ ಸಚಿವರು ಮತ್ತು ಅಧಿಕಾರಿಗಳ ಜೇಬಿಗೆ ಹೋಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಕೋವಿಡ್ ನಿರ್ವಹಣೆ ಹೆಸರಲ್ಲಿ ರಾಜ್ಯ ಸರಕಾರ ನಾಲ್ಕು ತಿಂಗಳಲ್ಲಿ 4,167ಕೋಟಿ ಖರ್ಚು ಮಾಡಿದೆ. ಶ್ರೀರಾಮುಲು 324ಕೋಟಿ ಖರ್ಚಾಗಿದೆ ಎನ್ನುತ್ತಾರೆ. ಶ್ರೀರಾಮುಲು ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಅಶ್ವಥ ನಾರಾಯಣ ಬೇರೆ ಲೆಕ್ಕ ಹೇಳುತ್ತಾರೆ. ಸುಳ್ಳು ಹೇಳುತ್ತಿರುವುದು ಯಾರು ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಕನಿಷ್ಟ 2000ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಶಂಕಿಸಿದ್ದಾರೆ.

ದಾಖಲೆಗಳ ಸಹಿತ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಿದ್ದರಾಮಯ್ಯ ಅವರು ತಾವು ಹಿಂದೆ ಆರೋಪಿಸಿದ್ದಕಿಂತ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ. ಕೋವಿಡ್ ಸಂಕಷ್ಟದ ಕಾಲದಲ್ಲೂ ರಾಜ್ಯ ಸರಕಾರ ಲೂಟಿಗೆ ಇಳಿದಿದೆ ಎಂದು ಆರೋಪಿಸಿದ್ದಾರೆ.

ಕೊರೋನಾ ಸಂಕಷ್ಟದಲ್ಲಿ ಬೆಂಕಿ ಬಿದ್ದಿರುವ ಮನೆಗಳಲ್ಲಿ ಗಳ ಹಿರಿಯುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಕೊರೋನಾದಿಂದ ಜನ ಆತಂಕದಲ್ಲಿದ್ದಾರೆ. ಜನತೆ ಬೀದಿಯಲ್ಲಿ ಹೆಣ ಹೊತ್ತು ತಿರುಗಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಕ್ರಮ ನಡೆಸಲು ಇವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಲೂಟಿ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಮತ್ತು ವಿಧಾನ ಮಂಡಲದ ಅಧಿವೇಶನ ಕರೆದು ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರಕ್ಕೆ ಈವರೆಗೆ 20 ಪತ್ರಗಳನ್ನು ಬರೆದಿದ್ದರೂ ಇಲ್ಲಿಯವರೆಗೆ ಒಂದೇ ಒಂದು ಉತ್ತರ ಕೊಟ್ಟಿಲ್ಲ. ಉತ್ತರ ಕೊಡಲು ಇಷ್ಟು ದಿನ ಬೇಕೇ? ಸರ್ಕಾರದಲ್ಲಿ ಪಾರದರ್ಶಕತೆ ಇದ್ದಿದ್ದರೆ ಸತ್ಯ ಹೇಳುತ್ತಿದ್ದರು. ಪ್ರತಿಪಕ್ಷ ನಾಯಕನಾಗಿರುವ ತಮಗೆ ಸರ್ಕಾರ ಮಾಹಿತಿ ಕೊಡುವುದಿಲ್ಲ ಎಂದರೆ ಹೇಗೆ? ಇಂತವರನ್ನು ಜನ ನಂಬುವುದಾದರೂ ಹೇಗೆ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕೊರೋನಾ ನಿಯಂತ್ರಣ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಜನರ ಜೀವ ಉಳಿಸಲು ನಮ್ಮ ಸಹಕಾರ ಇದ್ದೇ ಇದೆ. ಆದರೆ ಇಂತಹ ಸಂದರ್ಭದಲ್ಲಿ ಲೂಟಿ ಹೊಡೆಯಲು ಹೇಗೆ ಸಹಕಾರ ಕೊಡುವುದು? ಮುಖ್ಯಮಂತ್ರಿಗಳೇ ನಿಮ್ಮ ವೈಫಲ್ಯಕ್ಕೆ, ಭ್ರಷ್ಟಾಚಾರಕ್ಕೆ ಸಹಕರಿಸಿ ಜನದ್ರೋಹಿಯಾಗಲೇ? ಸರ್ಕಾರದ ಭ್ರಷ್ಟತೆಗೆ ಉತ್ತರ ಕೊಡಬೇಕು ಎಂಬುದು ತಮ್ಮ ಹಾಗೂ ಜನರ ಪ್ರಶ್ನೆಯಾಗಿದೆ. ಭ್ರಷ್ಟಾಚಾರದ ಬಗ್ಗೆ ನಾವು ತಿಳಿಸದಿದ್ದರೆ ಜನದ್ರೋಹವಾಗುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆನೀಡಿದ್ದರು. ರಾಜ್ಯ ಸರ್ಕಾರ ಸುಮಾರು ಮೂರು ಲಕ್ಷ ಪಿಪಿಇ ಕಿಟ್ ಗಳನ್ನು ಅದೇ ಚೀನಾದಿಂದ ಖರೀದಿಸಿದೆ. ಯಡಿಯೂರಪ್ಪ ಅವರೇ, ಇದೇನಾ ನಿಮ್ಮ ಪ್ರಧಾನಿಗಳ ಆತ್ಮನಿರ್ಭರತೆಯ ಪಾಲನೆ?

ಯಡಿಯೂರಪ್ಪ  ಅವರೇ, ಕೊರೊನಾ ನಿಯಂತ್ರಣದಲ್ಲಿ ನಿಮ್ಮ ಸರ್ಕಾರ ವಿಫಲವಾಗಲು ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರ ಕಾರಣ. ಇದರ ಪೈಸೆಪೈಸೆ ಲೆಕ್ಕ ನೀವು ಕೊಡಬೇಕಾಗುತ್ತದೆ. ಅದನ್ನು ಕೊಡುವವರೆಗೆ ನಾವು ಸುಮ್ಮನಿರುವುದಿಲ್ಲ, ಕಾದು ನೋಡಿ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೊರೊನಾ ಹೆಣದ ಹೆಸರಲ್ಲಿ ಬಿಜೆಪಿಯವರು ದುಡ್ಡು ಮಾಡಲು ಹೊರಟಿದ್ದಾರೆ. ಇದನ್ನು ಸಹಿಸಲಾಗದು ಎಂದರು.

ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ರಮೇಶ್ ಕುಮಾರ್, ವಿ.ಆರ್.ಸುದರ್ಶನ್, ವಿ.ಎಸ್.ಉಗ್ರಪ್ಪ ಉಪಸ್ಥಿತರಿದ್ದರು.

 

Get real time updates directly on you device, subscribe now.