ಕಾರವಾರ: ಸೋಂಕಿತರನ್ನು ಕೋವಿಡ್ ಸೆಂಟರ್‌ಗೆ ಒಯ್ಯಲು  ಅಡ್ಡಿ; 70 ಮಂದಿಯ ವಿರುದ್ಧ ಪ್ರಕರಣ

ಸೋಂಕಿಗೊಳಪಟ್ಟು ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿದ್ದ ಇದೇ ಪ್ರದೇಶದ ಯುವಕನೊಬ್ಬ ಕೋವಿಡ್ ಸೆಂಟರನಲ್ಲಿ ವ್ಯವಸ್ಥೆ ಚೆನ್ನಾಗಿಲ್ಲ ಎಂದು ಹೇಳಿದ್ದ ಹಿನ್ನೆಲೆ.

ಕರಾವಳಿ ಕರ್ನಾಟಕ ವರದಿ/ರವಿತೇಜ ಕಾರವಾರ
ಕಾರವಾರ: ನಗರದ ಕೋಣೆವಾಡಾದಲ್ಲಿ ಕೋವಿಡ್ ಸೋಂಕಿತರನ್ನು ಕೇರ್ ಸೆಂಟರ್‌ಗೆ ಕರೆದೊಯ್ಯಲು ಬಂದಿದ್ದ ಆರೋಗ್ಯ ಸಿಬ್ಬಂದಿಗಳಿಗೆ ಅಡ್ಡಿ ಪಡಿಸಿದ್ದ ಸ್ಥಳೀಯ ಸುಮಾರು 60-70 ಮಂದಿಯ ವಿರುದ್ಧ ಕಾರವಾರ ನಗರಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ನೋಡಲ್ ಅಧಿಕಾರಿಯಾಗಿರುವ ಕಂದಾಯ ನಿರೀಕ್ಷಕ ಶ್ರೀಧರ ನಾಯ್ಕ ಅವರು ಈ ದೂರು ದಾಖಲಿಸಿದ್ದಾರೆ.

ಕೊರೊನಾ ಕಾಯಿಲೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಕೋವಿಡ್-19 ಹರಡುವುದನ್ನು ತಪ್ಪಿಸಲು ಪ್ರತಿ ರವಿವಾರದ ಲಾಕ್‌ಡೌನ್ ಜಾರಿ ಮಾಡಿದೆ. ಇದೇ ವೇಳೆ ನಗರದ ಕೆಇಬಿ ರಸ್ತೆಯಲ್ಲಿ ವಾಸವಿರು 5 ಮಂದಿಯಲ್ಲಿ ಕೋವಿಡ್ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್ ಕೇಂದ್ರಕ್ಕೆ ರವಾನಿಸಲು ಸಿಬ್ಬಂದಿಗಳು ತೆರಳಿದ್ದ ವೇಳೆ ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ್ದಾರೆ.

ಈ ಹಿಂದೆ ಸೋಂಕಿಗೊಳಪಟ್ಟು ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿದ್ದ ಇದೇ ಪ್ರದೇಶದ ಯುವಕನೊಬ್ಬ ಕೋವಿಡ್ ಸೆಂಟರನಲ್ಲಿ ವ್ಯವಸ್ಥೆ ಚೆನ್ನಾಗಿಲ್ಲ ಎಂದು ಹೇಳಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ಕೊರೊನಾ ಸೆಂಟರ್‌ಗೆ ಕಳುಹಿಸುವುದಿಲ್ಲ ಎಂದು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಕೊರೊನಾ ಸೋಂಕಿಗೆ ತುತ್ತಾದವರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿತ್ತು.

ಈ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳು ದೂರು ನೀಡಿದ್ದು ದೂರಿನಲ್ಲಿ ಸುಮಾರು 60 ರಿಂದ 70 ಮಂದಿ ಗುಂಪಾಗಿ ಸೇರಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾಸ್ಕ್ ಧರಿಸದೇ ಪ್ರತಿಭಟನೆ ನಡೆಸಿ ಸೋಂಕಿತರನ್ನು ಕರೆದೊಯ್ಯಲು ವಿರೋಧಿಸಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸಿ ಗಲಾಟೆ ಮಾಡಿ ಮಾರಣಾಂತಿಕ ರೋಗವನ್ನು ಹರಡುವ ಕೃತ್ಯ ಎಸಗಿರುವ ಇವರ ವಿರುದ್ಧ ಕ್ರಮ ವಹಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.

ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Get real time updates directly on you device, subscribe now.