ಸಿವಿಲ್ ನ್ಯಾಯಾಧೀಶೆಯಾಗಿ ಮಂಗಳೂರಿನ ಅಸ್ರೀನಾ

ತಂದೆ-ತಾಯಿ, ಕುಟುಂಬದ ಪ್ರೋತ್ಸಾಹದಿಂದ ಕಠಿಣ ಪರಿಶ್ರಮದ ಫಲವಾಗಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಅವಕಾಶ.

ನನ್ನ ಮೊಮ್ಮಗಳು ನನ್ನ ಕನಸು ಸಾಧಿಸಿ ತೋರಿಸಿದ್ದಾಳೆ. ಖುಶಿಯಾಗಿದೆ ಎಂದು ಅಜ್ಜಿ ಅತ್ತಿಮೋಳು ಸಂತಸ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಹಳೆಯಂಗಡಿಯ ಅಸ್ರೀನಾ ಅವರು ಸಿವಿಲ್ ನ್ಯಾಯಾಧೀಶೆಯಾಗಿ ಹೈಕೋರ್ಟ್ ನ್ಯಾಯಾಧೀಶರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹಳೆಯಂಗಡಿಯ ಅಕ್ಬರ್ ಅಲಿ ಮತ್ತು ಅಸ್ಮತ್ ಅವರ ಪುತ್ರಿ ಅಸ್ರೀನಾ ಕೃಷ್ಣಾಪುರ ಚೊಕ್ಕಬೆಟ್ಟುವಿನಲ್ಲಿ ನೆಲೆಸಿದ್ದಾರೆ.

ಹಳೆಯಂಗಡಿ, ಕಿನ್ನಿಗೋಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅಸ್ರೀನಾ ಅವರು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ನಗರದ ಹಿರಿಯ ನ್ಯಾಯವಾದಿಗಳಾದ ಮಯೂರಾ ಕೀರ್ತಿ ಮತ್ತು ಶರತ್ ಕುಮಾರ್ ಬಿ. ಮಾರ್ಗದರ್ಶನದಲ್ಲಿ ವಕೀಲ ವೃತ್ತಿ ಆರಂಭಿಸಿದರು. 2019ರಲ್ಲಿ ನ್ಯಾಯಾಧೀಶ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.

ಬಾಲ್ಯದಲ್ಲೇ ಸಾಧಿಸುವ ಕನಸು

ಅಸ್ರೀನಾ ಅವರಿಗೆ ಬಾಲ್ಯದಲ್ಲೇ ಮಹತ್ತರ ಸಾಧನೆಗೈಯುವ ಕನಸಿತ್ತು. ಏನಾಗಬೇಕು ಎಂಬ ಬಗ್ಗೆ ನಿರ್ದಿಷ್ಟ ಗುರಿ ಇರಲಿಲ್ಲ. ಕಾನೂನು ವಿದ್ಯಾಭ್ಯಾಸ ಮಾಡುವ ಸಂದರ್ಭ ನ್ಯಾಯಾಧೀಶರಾಗಬೇಕೆಂಬ ಗುರಿ ಇಟ್ಟುಕೊಂಡರು. ಅಜ್ಜಂದಿರಾದ ಶೇಖ್ ಆದಂ, ಕಯ್ಯಿಲಿ ಬಾವಾಕ, ಅಜ್ಜಿಯಂದಿರಾದ ಸಲೀಮಮ್ಮ ಮತ್ತು ಅತೀಜಮ್ಮ, ತಂದೆ-ತಾಯಿ, ಕುಟುಂಬದ ಪ್ರೋತ್ಸಾಹದಿಂದ ಈ ದಿಸೆಯಲ್ಲಿ ಕಠಿಣ ಪರಿಶ್ರಮದ ಫಲವಾಗಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಅವಕಾಶ ಎಂದು ಅಸ್ರೀನಾ ಅವರು ಹೇಳಿದ್ದಾರೆ.

ಮೊಮ್ಮಗಳು ನನ್ನ ಕನಸು ಸಾಧಿಸಿ ತೋರಿಸಿದ್ದಾಳೆ.

ನಮ್ಮ ಕಾಲದಲ್ಲಿ ಹಿರಿಯರು ಹೆಣ್ಣುಮಕ್ಕಳಿಗೆ ಕಲಿಯುವ ಅವಕಾಶ ಕಲ್ಪಿಸಿಕೊಡುತ್ತಿರಲಿಲ್ಲ. ನನಗೆ ಕಲಿಯುವ ಆಸೆ ತುಂಬಾ ಇತ್ತು. ನನ್ನ ಮೊಮ್ಮಗಳು ನನ್ನ ಕನಸು ಸಾಧಿಸಿ ತೋರಿಸಿದ್ದಾಳೆ. ಖುಶಿಯಾಗಿದೆ ಎಂದು ಅಜ್ಜಿ ಅತ್ತಿಮೋಳು ಸಂತಸ ವ್ಯಕ್ತಪಡಿಸಿದ್ದಾರೆ.

ಅಸ್ರೀನಾ ಅವರ ತಂದೆ ಎಂಆರ್‌ಪಿಎಲ್ ಉದ್ಯೋಗಿಯಾಗಿದ್ದು, ತಾಯಿ ಗೃಹಿಣಿ. ಅಸ್ರೀನಾ ಅವರ ಅಕ್ಕ ಉಪನ್ಯಾಸಕಿ, ತಂಗಿ ಪಿಎಚ್‌ಡಿ ಮಾಡುತ್ತಿದ್ದಾರೆ.

Get real time updates directly on you device, subscribe now.