ದಾವಣಗೆರೆ: ಕೆ.ಎಲ್.ಅಶೋಕ್ ನಿಂದಿಸಿದ ಪೊಲೀಸ್ ವಿರುದ್ಧ  ಕ್ರಮಕ್ಕೆ ಆಗ್ರಹ

ಕೊಪ್ಪ ಪೋಲೀಸರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು ಅಮಾನತು ಮಾಡಬೇಕೆಂದು ಪ್ರಗತಿಪರ ಸಂಘಟನೆಗಳ ಆಗ್ರಹ

ನಿರಂತರ ಹೋರಾಟಗಳಿಂದ ರಾಜ್ಯದಾದ್ಯಂತ ಗುರುತಿಸಿಕೊಂಡಿರುವ ಕೆ.ಎಲ್. ಅಶೋಕ್ ಅವರನ್ನು ಪೊಲೀಸರು ಅವಮಾನಿಸಿರುವುದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಕರಾವಳಿ ಕರ್ನಾಟಕ ವರದಿ
ದಾವಣಗೆರೆ: ಸಾಮಾಜಿಕ ಹೋರಾಟಗಾರ  ಕೆ.ಎಲ್.ಅಶೋಕ್  ಮತ್ತವರ ಕುಟುಂಬದವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಕೊಪ್ಪ ಪೋಲೀಸರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು ಅಮಾನತು ಮಾಡಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ದಿಂದ  ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಎಸಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸತೀಶ್ ಅರವಿಂದ್, ಕರಿಬಸಪ್ಪ, ಜಬೀನ ಖಾನಂ, ಟಿ.ಅಸ್ಗರ್ ಖಲೀಲ್ ಘನಿ ತಾಹೀರ್ ಅದೀಲ್ ರಫಿಕ್ ಅಹ್ಮದ್ ಬಾಷ, ಮಹಬೂಬ್ ಬಾಷ ಇತರರು ಉಪಸ್ಥಿತರಿದ್ದರು.

ಜನಪರ ಹೋರಾಟಗಾರ ಮತ್ತು ಚಿಂತಕರಾದ ಕೆ.ಎಲ್.ಅಶೋಕ್ ಅವರು ಖಾಸಗಿ ಕೆಲಸಕ್ಕಾಗಿ ಪತ್ನಿ, ಮಗಳು ಮತ್ತು ಅತ್ತೆಯೊಂದಿಗೆ ಕೊಪ್ಪ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಕೊಪ್ಪ ಪೊಲೀಸ್ ಠಾಣೆಯ ಎಸ್ಸೈ ಮತ್ತು ಪೊಲೀಸ್ ಪೇದೆಗಳು ಕಾರು ನಿಲುಗಡೆ ವಿಷಯಕ್ಕೆ ಸಂಬಂಧಿಸಿ ಅಶೋಕ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದರು.

ಕೊಪ್ಪ ಪಟ್ಟಣಕ್ಕೆ ಬಂದಾಗ ಅಶೋಕ್ ಅವರು ನಾನ್ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ್ದಾರೆ ಎಂದು ಕೊಪ್ಪ ಪೊಲೀಸ್ ಪೇದೆ ರಮೇಶ್ ಮತ್ತು ಮಹಿಳಾ ಪೇದೆಗಳು ಅಶೋಕ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಸಂದರ್ಭ ಅಶೋಕ್ ಅವರು ತಾನು ತಿಳಿಯದೇ ನಾನ್ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದೆ. ಈ ಬಗ್ಗೆ ದಂಡ ಹಾಕಿದ್ದಲ್ಲಿ ನ್ಯಾಯಾಲಯದಲ್ಲಿ ಕಟ್ಟಲು ಸಿದ್ದನಿದ್ದೇನೆ ಎಂದು ಅವಾಚ್ಯವಾಗಿ ತನ್ನನ್ನು ಮತ್ತು ಪತ್ನಿಯನ್ನು ನಿಂದಿಸುತ್ತಿದ್ದ ಪೊಲೀಸ್ ಪೇದೆಗೆ ತಿಳಿಸಿದ್ದರು.

ಪೊಲೀಸ್ ಪೇದೆ ನಿಂದಿಸುವುದನ್ನು ಮುಂದುವರಿಸಿದಾಗ ಪೊಲೀಸ್ ದುರ್ವರ್ತನೆ ಬಗ್ಗೆ ಸ್ಥಳೀಯ ಶಾಸಕರಾದ ರಾಜೇಗೌಡ ಅವರ ಗಮನಕ್ಕೆ ತರುವುದಾಗಿ ತಿಳಿಸಿದ್ದರು. ಈ ಸಂದರ್ಭ ಪೊಲೀಸ್ ಪೇದೆ, ಅಶೋಕ್ ಅವರ ಸಮಜಾಯಿಸಿಯನ್ನಾಗಲಿ, ಅವರ ಮಾತುಗಳನ್ನಾಗಲಿ ಕೇಳದೆ ಕಾರು ಸೀಝ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ಶಾಸಕ ರಾಜೇಗೌಡನಿಗಲ್ಲದಿದ್ದರೆ ಅವರಪ್ಪನಿಗೆ ಹೇಳು ಎಂದು ಏಕವಚನದಲ್ಲಿ ನಿಂದಿಸಿದ್ದ. ಅಶೋಕ್ ಅವರ ಕಾರು ಸೀಝ್ ಮಾಡಿದ್ದಲ್ಲದೇ ಅವರನ್ನು ಠಾಣೆಗೆ ಕರೆದೊಯ್ದಿದ್ದು, ಠಾಣಾಧಿಕಾರಿ ರವಿ ಎಂಬವರು ಕೂಡ ಉಡಾಫೆಯಾಗಿ ವರ್ತಿಸಿದ್ದರು ಎಂದು ಅಶೋಕ್ ಘಟನೆಗಳನ್ನು ರಾಜ್ಯದ ಜನತೆಗೆ ವಿಡೀಯೊ ಸಂದೇಶದ ಮೂಲಕ ಹೇಳಿದ್ದರು.

ನಿರಂತರ ಹೋರಾಟಗಳಿಂದ ರಾಜ್ಯದಾದ್ಯಂತ ಗುರುತಿಸಿಕೊಂಡಿರುವ ಕೆ.ಎಲ್. ಅಶೋಕ್ ಅವರನ್ನು ಪೊಲೀಸರು ಅವಮಾನಿಸಿರುವುದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಅಶೋಕ್ ಹಾಗೂ ಅವರ ಕುಟುಂಬಸ್ಥರನ್ನು ಪೊಲೀಸರು ಅವಮಾನಿಸಿರುವ ಹಿಂದೆ ಪೊಲೀಸರು ದುರುದ್ದೇಶ ಹೊಂದಿದ್ದಾರೆ ಎಂದು ರಾಜ್ಯದಾದ್ಯಂತ ಜನಪರ ಸಂಘಟನೆಗಳು ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟಿಸುತ್ತಿವೆ.

Get real time updates directly on you device, subscribe now.