ಮಂಗಳೂರು ಕರಾವಳಿ ಕಾವಲುಪಡೆಯಿಂದ ಸಮುದ್ರದಲ್ಲಿ ಸಿಲುಕಿದ್ದ ಭಟ್ಕಳದ 24ಮೀನುಗಾರರ ರಕ್ಷಣೆ

ಮಂಗಳೂರು ಕರಾವಳಿ ಕಾವಲು ಪಡೆಯ ‘ಕಸ್ತೂರ್ಬಾ ಗಾಂಧಿ’ ಹಡಗಿನ ಮೂಲಕ ರಕ್ಷಣಾ ಕಾರ್ಯಾಚರಣೆ.

44ಗಂಟೆ ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರು ಭಟ್ಕಳ ಸಮುದ್ರತೀರಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕಾರವಾರ: ಭಟ್ಕಳ ಸಮುದ್ರತೀರದಿಂದ ಹದಿನೇಳು ನಾಟಿಕಲ್ ಮೈಲು ದೂರದಲ್ಲಿ ಸಮುದ್ರದಲ್ಲಿ ಎಂಜಿನ್ ವೈಫಲ್ಯಗೊಂಡಿದ್ದ ಭೋಟ್‌ನಲ್ಲಿದ್ದ 24ಮೀನುಗಾರರನ್ನು ಕರಾವಳಿ ಕಾವಲುಪಡೆ ರಕ್ಷಿಸಿದೆ.

ಭಟ್ಕಳದ ‘ಖಮ್ರುಲ್ಲಾ ಬಾಹರ್’ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿದ್ದಾಗ ಗುರುವಾರ ಮಧ್ಯಾಹ್ನ ಎರಡು ಗಂಟೆಗೆ ಎಂಜಿನ್ ವಿಫಲತೆಯಿಂದ ಸಮುದ್ರದಲ್ಲಿ ಸಿಲುಕಿದ ಬಗ್ಗೆ ಬೋಟ್ ಮಾಲಕರು ಮೀನುಗಾರಿಕಾ ಇಲಾಖೆಯ ಗಮನಕ್ಕೆ ತಂದು ಮೀನುಗಾರರ ರಕ್ಷಣೆಗೆ ಕೋರಿದ್ದರು. ಕರಾವಳಿ ಕಾವಲುಪಡೆಯ ಗಮನಕ್ಕೂ ವಿಷಯ ತಂದಿದ್ದರು.

ಮಂಗಳೂರು ಕರಾವಳಿ ಕಾವಲು ಪಡೆಯ ‘ಕಸ್ತೂರ್ಬಾ ಗಾಂಧಿ’ ಹಡಗಿನ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, 44ಗಂಟೆ ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರು ಭಟ್ಕಳ ಸಮುದ್ರತೀರಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ.

ಗುರುವಾರ ಸಂಜೆ ಮಂಗಳೂರು ಕೋಸ್ಟ್ ಗಾರ್ಡ್ ಸಿಬಂದಿ ಸ್ಥಳಕ್ಕೆ ಹೋಗಿದ್ದರೂ ಹವಾಮಾನ ಪ್ರತಿಕೂಲವಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಶುಕ್ರವಾರ ಬೆಳಿಗ್ಗೆ ರೋಪ್ ಮೂಲಕ ಯಾಂತ್ರಿಕ ದೋಣಿ ತಲುಪಿ ಮೀನುಗಾರರನ್ನು ರಕ್ಷಿಸಿದ್ದಾರೆ.

Get real time updates directly on you device, subscribe now.