ಹೋರಾಟಗಾರ ಕೆ.ಎಲ್.ಅಶೋಕ್ ಅವರನ್ನು ಅವಮಾನಿಸಿದ ಪೊಲೀಸರ ವಿರುದ್ಧ ‘ಕೊಪ್ಪ ಚಲೊ’ ಬೃಹತ್ ಪ್ರತಿಭಟನೆ

ಕೆ.ಎಲ್.ಅಶೋಕ್ ಅವರನ್ನು ಅವಮಾನಿಸಿದ ಕೊಪ್ಪ ಪೊಲೀಸ್ ಪೇದೆ ರಮೇಶ್ ಆರ್ ಮತ್ತು ಠಾಣಾಧಿಕಾರಿ ರವಿಯನ್ನು ಅಮಾನತುಗೊಳಿಸಬೇಕೆಂದು ರಾಜ್ಯಾದ್ಯಂತ ಭಾರೀ ಪ್ರತಿಭಟನೆಗಳು ಪ್ರತೀ ದಿನವೂ ನಡೆಯುತ್ತಿವೆ.

ರಾಜ್ಯಾದ್ಯಂತ ಗುರುತಿಸಲ್ಪಟ್ಟ ಕೆ.ಎಲ್.ಅಶೋಕ್ ಅವರಂಥವರಿಗೆ ಹೀಗಾದರೆ ಜನಸಾಮಾನ್ಯರ ಪಾಡೇನು? ಎಂಬ ಕಾರಣಕ್ಕೆ ರಾಜ್ಯದಾದ್ಯಂತ ಜನಪರ ಸಂಘಟನೆಗಳ ಹೋರಾಟ.

ಕರಾವಳಿ ಕರ್ನಾಟಕ ವರದಿ
ಕೊಪ್ಪ: ನಾಡಿನ ಖ್ಯಾತ ಹೋರಾಟಗಾರ, ಚಿಂತಕ ಮತ್ತು ಪತ್ರಕರ್ತರಾದ ಕೆ.ಎಲ್.ಅಶೋಕ್ ಅವರನ್ನು ಕ್ಷುಲ್ಲಕ ಕಾರಣಕ್ಕಾಗಿ ಅವಮಾನಿಸಿದ ಕೊಪ್ಪ ಠಾಣಾಧಿಕಾರಿ ಮತ್ತು ಪೇದೆಯ ಅಮಾನತಿಗೆ ಆಗ್ರಹಿಸಿ ಸೆ.14, ಸೋಮವಾರ ಮಧ್ಯಾಹ್ನ3 ಗಂಟೆಗೆ ‘ಕೊಪ್ಪ ಚಲೋ’ ಬೃಹತ್ ಪ್ರತಿಭಟನೆಯನ್ನು ‘ಪ್ರಗತಿಪರ ಸಂಘಟನೆಗಳ ಒಕ್ಕೂಟ’ ಹಮ್ಮಿಕೊಂಡಿದೆ.

ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಹೋರಾತ್ರಿ ಧರಣಿ

ಚಿಂತಕ, ಹೋರಾಟಗಾರ ಕೆ. ಎಲ್.ಅಶೋಕ್ ಅವರನ್ನು ‘ನೋ ಪಾರ್ಕಿಂಗ್’ ವಿಚಾರಕ್ಕೆ ಸಂಬಂಧಿಸಿದಂತೆ ನಿಂದಿಸಿದ ಕೊಪ್ಪ ಠಾಣೆಯ ಪೇದೆ ರಮೇಶ್ ಮತ್ತು ಎಸ್ಸೈ ರವಿ ಅವರನ್ನು ಅಮಾನತುಗೊಳಿಸಿ ತನಿಖೆ ನಡೆಸುವಂತೆ ಶಿವಮೊಗ್ಗದ ಜಾತ್ಯತೀತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ಪೊಲೀಸರು ಅಶೋಕ್ ಅವರನ್ನು ನಿಂದಿಸಿರುವುದರ ವಿರುದ್ಧ ಸೆ.14ರಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ರಾಜ್ಯಾದ್ಯಂತ ‘ಕೊಪ್ಪ ಚಲೊ’ ಹಮ್ಮಿಕೊಳ್ಳಲಾಗಿದ್ದು, ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಹೋರಾತ್ರಿ ಧರಣಿ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಏನೂ ಕ್ರಮಕೈಗೊಂಡಿಲ್ಲ

ಅವಾಚ್ಯವಾಗಿ ನಿಂದಿಸಿದ ಪೊಲೀಸರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಈ ತನಕ ಏನೂ ಕ್ರಮಕೈಗೊಂಡಿಲ್ಲ. ಜನಪರ ಹೋರಾಟಗಾರರನ್ನು ಈ ರೀತಿ ನಡೆಸಿಕೊಂಡರೆ ಜನಸಾಮಾನ್ಯರ ಪಾಡೇನು ಎಂದು ಜಾತ್ಯತೀತ ಸಂಘಟನೆಗಳ ಕಾರ್ಯದರ್ಶಿ ನಾಗರಾಜ್ ಪ್ರಶ್ನಿಸಿದರು.

ಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ಸೇವಾ ಸಮಿತಿ ಅಧ್ಯಕ್ಷ ಕಾಂತರಾಜು, ಕರ್ನಾಟಕ ಜನಶಕ್ತಿ ಜಿಲ್ಲಾ ಸಮನ್ವಯಕಾರ ರಾಮು ಕೌಳಿ, ಕರ್ನಾಟಕ ಜನಶಕ್ತಿ ಸಂಘದ ಪದಾಧಿಕಾರಿ ಆನಂದ ಗಡಿಕಲ್ಲು ಇದ್ದರು.

ಪಿಎಸ್ಸೈ ಪೂರ್ವಾಪರ ಪರಿಶೀಲಿಸದೆ ದರ್ಪ ತೋರಿದ್ದಾರೆ: ಅಶೋಕ್

ಕುಟುಂಬದೊಂದಿಗೆ ಕೊಪ್ಪಕ್ಕೆ ಬಂದಿದ್ದಾಗ ಅರಿಯದೇ ನೋ ಪಾರ್ಕಿಂಗ್ ‌ನಲ್ಲಿ ವಾಹನ ನಿಲ್ಲಿಸಿಕೊಂಡ ತಪ್ಪಿಗೆ ದಂಡ ಕಟ್ಟಲು ಸಿದ್ದನಿದ್ದೆ. ಕಾನ್ಸ್ಟೇಬಲ್ ರಮೇಶ್ ಉದ್ದೇಶಪೂರ್ವಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಶಾಸಕರ ಪರಿಚಯಸ್ಥ ಎಂದರೂ ಕೇಳದೇ ಶಾಸಕರನ್ನೂ ಬೈದಿದ್ದಾರೆ. ಠಾಣೆಗೆ ಕರೆಸಿದ ಪಿಎಸ್ಸೈ ರವಿ ಅವರು ಪೂರ್ವಾಪರ ಪರಿಶೀಲಿಸದೆ ದರ್ಪ ತೋರಿಸಿದ್ದಾರೆ. ರವಿಯವರು ನನ್ನನ್ನು ಠಾಣೆಗೆ ಕರೆಸಿಲ್ಲ ಎಂದು ಹೇಳಿರುವ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಕೆ.ಎಲ್.ಅಶೋಕ್ ಆಗ್ರಹಿಸಿದ್ದಾರೆ.

ಕೆ.ಎಲ್.ಅಶೋಕ್ ಅವರನ್ನು ಅವಮಾನಿಸಿದ ಕೊಪ್ಪ ಪೊಲೀಸ್ ಪೇದೆ ರಮೇಶ್ ಆರ್ ಮತ್ತು ಠಾಣಾಧಿಕಾರಿ ರವಿಯನ್ನು ಅಮಾನತುಗೊಳಿಸಬೇಕೆಂದು ರಾಜ್ಯಾದ್ಯಂತ ಭಾರೀ ಪ್ರತಿಭಟನೆಗಳು ಪ್ರತೀ ದಿನವೂ ನಡೆಯುತ್ತಿವೆ.

ಜನಪರ ಹೋರಾಟಗಾರ ಮತ್ತು ಚಿಂತಕರಾದ ಕೆ.ಎಲ್.ಅಶೋಕ್ ಅವರು ಖಾಸಗಿ ಕೆಲಸಕ್ಕಾಗಿ ಪತ್ನಿ, ಮಗಳು ಮತ್ತು ಅತ್ತೆಯೊಂದಿಗೆ ಕೊಪ್ಪ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಕೊಪ್ಪ ಪೊಲೀಸ್ ಠಾಣೆಯ ಎಸ್ಸೈ ಮತ್ತು ಪೊಲೀಸ್ ಪೇದೆಗಳು ಕಾರು ನಿಲುಗಡೆ ವಿಷಯಕ್ಕೆ ಸಂಬಂಧಿಸಿ ಅಶೋಕ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದರು.

ಕೆ.ಎಲ್.ಅಶೋಕ್ ಅವರಂಥವರಿಗೆ ಹೀಗಾದರೆ ಜನಸಾಮಾನ್ಯರ ಪಾಡೇನು?

ನಾಡಿನಲ್ಲಿ ಸೌಹಾರ್ದ ನೆಲೆಸುವುದಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು, ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಹೋರಾಟಗಾರ, ಚಿಂತಕ ಮತ್ತು ಪತ್ರಕರ್ತರಾಗಿಯೂ ರಾಜ್ಯಾದ್ಯಂತ ಗುರುತಿಸಲ್ಪಟ್ಟ ಕೆ.ಎಲ್.ಅಶೋಕ್ ಅವರಂಥವರಿಗೆ ಹೀಗಾದರೆ ಜನಸಾಮಾನ್ಯರ ಪಾಡೇನು? ಅಶೋಕ್ ಅವರಂಥವರನ್ನೇ ಪೊಲೀಸ್ ಇಲಾಖೆ ಈ ರೀತಿ ಕಾನೂನು ಬಾಹಿರವಾಗಿ ದೌರ್ಜನ್ಯದಿಂದ ನಡೆಸಿಕೊಂಡರೆ, ಅವಮಾನಿಸಿದರೆ ಜನ ಸಾಮಾನ್ಯರ ಕತೆ ಏನು? ಈ ಹಿನ್ನೆಲೆಯಲ್ಲಿ ಅಶೋಕ್ ಅವರಿಗಾದ ಅನ್ಯಾಯ ಇನ್ನ್ಯಾರಿಗೂ ಆಗಬಾರದು ಎಂಬ ಕಾರಣಕ್ಕೆ ರಾಜ್ಯದಾದ್ಯಂತ ಜನಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ.

ಕಾರನ್ನು ನಾನ್ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದಕ್ಕೆ ನಿಂದನೆ

ಕೊಪ್ಪ ಪಟ್ಟಣಕ್ಕೆ ಬಂದಾಗ ಅಶೋಕ್ ಅವರು ನಾನ್ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ್ದಾರೆ ಎಂದು ಕೊಪ್ಪ ಪೊಲೀಸ್ ಪೇದೆ ರಮೇಶ್ ಮತ್ತು ಮಹಿಳಾ ಪೇದೆಗಳು ಅಶೋಕ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಸಂದರ್ಭ ಅಶೋಕ್ ಅವರು ತಾನು ತಿಳಿಯದೇ ನಾನ್ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದೆ. ಈ ಬಗ್ಗೆ ದಂಡ ಹಾಕಿದ್ದಲ್ಲಿ ನ್ಯಾಯಾಲಯದಲ್ಲಿ ಕಟ್ಟಲು ಸಿದ್ದನಿದ್ದೇನೆ ಎಂದು ಅವಾಚ್ಯವಾಗಿ ತನ್ನನ್ನು ಮತ್ತು ಪತ್ನಿಯನ್ನು ನಿಂದಿಸುತ್ತಿದ್ದ ಪೊಲೀಸ್ ಪೇದೆಗೆ ತಿಳಿಸಿದ್ದರು.

‘ಶಾಸಕ ರಾಜೇಗೌಡನಿಗಲ್ಲದಿದ್ದರೆ ಅವರಪ್ಪನಿಗೆ ಹೇಳು’ ಎಂದು ನಿಂದಿಸಿದ್ದ ಪೇದೆ

ಪೊಲೀಸ್ ಪೇದೆ ನಿಂದಿಸುವುದನ್ನು ಮುಂದುವರಿಸಿದಾಗ ಪೊಲೀಸ್ ದುರ್ವರ್ತನೆ ಬಗ್ಗೆ ಸ್ಥಳೀಯ ಶಾಸಕರಾದ ರಾಜೇಗೌಡ ಅವರ ಗಮನಕ್ಕೆ ತರುವುದಾಗಿ ತಿಳಿಸಿದ್ದರು. ಈ ಸಂದರ್ಭ ಪೊಲೀಸ್ ಪೇದೆ, ಅಶೋಕ್ ಅವರ ಸಮಜಾಯಿಸಿಯನ್ನಾಗಲಿ, ಅವರ ಮಾತುಗಳನ್ನಾಗಲಿ ಕೇಳದೆ ಕಾರು ಸೀಝ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ಶಾಸಕ ರಾಜೇಗೌಡನಿಗಲ್ಲದಿದ್ದರೆ ಅವರಪ್ಪನಿಗೆ ಹೇಳು ಎಂದು ಏಕವಚನದಲ್ಲಿ ನಿಂದಿಸಿದ್ದ.

ಅಶೋಕ್ ಕಾರ್ ಸೀಝ್, ಠಾಣಾಧಿಕಾರಿಯಿಂದಲೂ ಉಡಾಫೆ

ಅಶೋಕ್ ಅವರ ಕಾರು ಸೀಝ್ ಮಾಡಿದ್ದಲ್ಲದೇ ಅವರನ್ನು ಠಾಣೆಗೆ ಕರೆದೊಯ್ದಿದ್ದು, ಠಾಣಾಧಿಕಾರಿ ರವಿ ಎಂಬವರು ಕೂಡ ಉಡಾಫೆಯಾಗಿ ವರ್ತಿಸಿದ್ದರು ಎಂದು ಅಶೋಕ್ ಘಟನೆಗಳನ್ನು ರಾಜ್ಯದ ಜನತೆಗೆ ವಿಡೀಯೊ ಸಂದೇಶದ ಮೂಲಕ ಹೇಳಿದ್ದರು.

ಪತ್ನಿ, ಮಗಳು, ಅತ್ತೆ ಮುಂದೆ ಅಶೋಕ್‌ಗೆ ಮಾನಸಿಕ ಹಿಂಸೆ

ನಿರಂತರ ಹೋರಾಟಗಳಿಂದ ರಾಜ್ಯದಾದ್ಯಂತ ಗುರುತಿಸಿಕೊಂಡಿರುವ ಕೆ.ಎಲ್. ಅಶೋಕ್ ಅವರನ್ನು ಪೊಲೀಸರು ಅವಮಾನಿಸಿರುವುದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಅಶೋಕ್ ಹಾಗೂ ಅವರ ಕುಟುಂಬಸ್ಥರನ್ನು ಪೊಲೀಸರು ಅವಮಾನಿಸಿರುವ ಹಿಂದೆ ಪೊಲೀಸರು ದುರುದ್ದೇಶ ಹೊಂದಿದ್ದಾರೆ ಎಂದು ರಾಜ್ಯದಾದ್ಯಂತ ಜನಪರ ಸಂಘಟನೆಗಳು ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟಿಸುತ್ತಿವೆ.

Get real time updates directly on you device, subscribe now.