ಕೆ.ಎಲ್.ಅಶೋಕ್‌ರೊಂದಿಗೆ ದುರ್ವರ್ತನೆ ತೋರಿದ ಪೊಲೀಸ್ ವರ್ಗಾವಣೆ: ‘ಕೊಪ್ಪ ಚಲೋ’ ರದ್ದು

‘ನೋ ಪಾರ್ಕಿಂಗ್’ ವಿಚಾರಕ್ಕೆ ಸಂಬಂಧಿಸಿ ಹೋರಾಟಗಾರ ಕೆ.ಎಲ್.ಅಶೋಕ್ ಅವರನ್ನು ರಸ್ತೆಯಲ್ಲಿ ಅವಮಾನಿಸಿದ್ದ ಪೊಲೀಸ್ ಪೇದೆ ವರ್ಗಾವಣೆ.

ಸೆ.14ರ ‘ಕೊಪ್ಪ ಚಲೊ’ ಚಳುವಳಿಗೆ ಅನುಮತಿ ನೀಡಿರಲಿಲ್ಲ. ಚಳುವಳಿಗೆ ಪ್ರತಿಯಾಗಿ ಬಜರಂಗದಳದ ಹೋರಾಟಕ್ಕೂ ಅನುಮತಿ ಇಲ್ಲ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಅಕ್ಷಯ್ ಮಚೀಂದ್ರ ತಿಳಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕೊಪ್ಪ: ‘ನೋ ಪಾರ್ಕಿಂಗ್’ ವಿಚಾರಕ್ಕೆ ಸಂಬಂಧಿಸಿ ಹೋರಾಟಗಾರ ಕೆ.ಎಲ್.ಅಶೋಕ್ ಅವರನ್ನು ರಸ್ತೆಯಲ್ಲಿ ಅವಮಾನಿಸಿದ್ದ ಪೊಲೀಸ್ ಪೇದೆಯನ್ನು ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಸೋಮವಾರ, ಸೆ.14ರಂದು ನಡೆಯಬೇಕಿದ್ದ ‘ಕೊಪ್ಪ ಚಲೊ’ ಚಳುವಳಿಯನ್ನು ರದ್ದುಗೊಳಿಸಲಾಗಿದೆ ಎಂದು ಸಂವಿಧಾನ ಉಳಿಸಿ ಹೋರಾಟ ಸಮಿತಿಯ ಗೌಸ್ ಮೊಹಿದ್ದೀನ್ ಅವರು ತಿಳಿಸಿದ್ದಾರೆ.

ಕೆ.ಎಲ್.ಅಶೋಕ್ ಅವರನ್ನು ಅವಮಾನಿಸಿದ ಪೊಲೀಸ್ ಪೇದೆಯ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆದು, ‘ಕೊಪ್ಪ ಚಲೋ’ ಬೃಹತ್ ಪ್ರತಿಭಟನೆ ಆಯೋಜಿಸಲಾದ ಹಿನ್ನೆಲೆಯಲ್ಲಿ ಪ್ರತಿಭಟನೆಯ ಕಾವು ಪೊಲೀಸ್ ಇಲಾಖೆಯನ್ನು ಮುಟ್ಟಿತ್ತು.

ಪೊಲೀಸ್ ಪೇದೆಯನ್ನು ವರ್ಗಾಯಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ‘ಕೊಪ್ಪ ಚಲೊ’ ರದ್ದುಗೊಂಡಿದೆ.

ಸೆ.14ರ ‘ಕೊಪ್ಪ ಚಲೊ’ಗೆ ಪ್ರತಿಯಾಗಿ ಬಜರಂಗದಳದಿಂದ ಹೋರಾಟ ಮಾಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ‘ಕೊಪ್ಪ ಚಲೊ’ ಜಿಲ್ಲೆಯಾದ್ಯಂತ ಭಾರೀ ಗಮನ ಸೆಳೆದಿತ್ತು.

ಸೆ.14ರ ‘ಕೊಪ್ಪ ಚಲೊ’ ಚಳುವಳಿಗೆ ಅನುಮತಿ ನೀಡಿರಲಿಲ್ಲ. ಚಳುವಳಿಗೆ ಪ್ರತಿಯಾಗಿ ಬಜರಂಗದಳದ ಹೋರಾಟಕ್ಕೂ ಅನುಮತಿ ಇಲ್ಲ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಅಕ್ಷಯ್ ಮಚೀಂದ್ರ ತಿಳಿಸಿದ್ದಾರೆ.

Get real time updates directly on you device, subscribe now.