About Us
ಇದು ಹೇಳಿಕೇಳಿ ಮಾಹಿತಿ ತಂತ್ರಜ್ಞಾನದ ಯುಗ. ಹತ್ತೂ ದಿಕ್ಕಿನಿಂದ ಉಬ್ಬರಿಸಿ ಬರುತ್ತಿದೆ ಮಾಹಿತಿ. ಮಾಹಿತಿಯನ್ನು ಬಯಸುವವರ ಸಂಖ್ಯೆ ಅಗಾಧ. ‘ಮಾಹಿತಿ ಮಾರಾಟಗಾರರಿಗೂ’ ಬರವಿಲ್ಲ! ಮಾಹಿತಿಯನ್ನು ಮೊಗೆದು ಸುದ್ದಿ ಮಾಡುವುದು ಸುಲಭವಾಗಿದೆಯೇನೋ ಸರಿ. ಆದರೆ ಅದು ಯಾರ ಸುದ್ದಿ, ಯಾರಿಂದ ಸುದ್ದಿ, ಯಾರಿಗಾ ಸುದ್ದಿ, ಯಾತಕ್ಕಾಗಿ ಸುದ್ದಿ ಎನ್ನುವುದರ ಮೇಲೆ ಸುದ್ದಿಗೆ ಹಲವು ರಂಗುಗಳು ಬಂದುಬಿಟ್ಟಿವೆ. ವಾಸ್ತವವನ್ನು ಅಡಿಮೇಲು ಮಾಡಿ ‘ವಾಸ್ತವವೇ ಅಡಿಮೇಲಾಗಿದೆ ನೋಡಿ’ ಎಂದು ನಂಬಿಸುವಷ್ಟು ಸುದ್ದಿ ನೈಪುಣ್ಯದ ಕಾಲವೂ ಇದಾಗಿದೆ. ಸುಲಭವಾಗಿ ದಕ್ಕುವ ಸುದ್ದಿ ಸುಲಭದಲ್ಲಿಯೇ ನಂಬಿಸಿ ಬಿಡುತ್ತದೆ ಅಥವಾ ನಂಬಿಕೆ ಕೆಡಿಸುತ್ತದೆ. ಹೀಗಾಗಿ ಕೊಡುವ ಸುದ್ದಿಗಳು ಜವಾಬ್ಧಾರಿಯುತವಾಗಿರಬೇಕು ಮತ್ತು ಬಿತ್ತರಿಸುವ ಮಹಿತಿಯಲ್ಲಿ ಸೂಕ್ಷ್ಮ ಒಳನೋಟಗಳಿರಬೇಕು. ಈ ಹೊಣೆಗಾರಿಕೆಯಿಲ್ಲದೆ ಇರುವ ಸುದ್ದಿಗಳ ಕಾರುಬಾರು ಜಾಸ್ತಿ ಆಗುತ್ತಿದೆ ಎನ್ನುವ ಅನುಮಾನ ನಮ್ಮೆಲ್ಲರನ್ನೂ ಈಗ ಕಾಡುತ್ತಿದೆ.
ಊರ ಸುದ್ದಿಗಳು ಜಗವೆಲ್ಲ ಹಬ್ಬಬೇಕು ಮತ್ತು ಜಗದ ಸುದ್ದಿಗಳೆಲ್ಲ ನಮ್ಮೂರನು ತಟ್ಟಬೇಕು. ಸುದ್ದಿಗಳ ಜೊತೆಗೆ ನಮ್ಮ ನೆಲದ ಸಂಸ್ಕೃತಿಯ ಅನಾವರಣವಾಗಬೇಕು. ಇಲ್ಲಿನ ಭಾಷೆ, ಜನ, ಜೀವನ, ಜನಪದ ಎಲ್ಲವೂ ಹತ್ತು ದಿಕ್ಕುಗಳಿಗೆ ಪಸರಿಸಬೇಕು. ಜೊತೆಗೆ ಜನರಿಗೆ ನೈಜ ಸಮಾಚಾರ ಸಿಗುವಂತಾಗಬೇಕು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ಮಾಡುತ್ತಿರುವ ಪ್ರಯತ್ನವೇ www.karavalikarnataka.com
ಕರಾವಳಿಯ ಸಮಗ್ರ ಸುದ್ದಿ, ರಾಜ್ಯ ಮತ್ತು ದೇಶ ವಿದೇಶಗಳ ಪ್ರಮುಖ ಸುದ್ದಿಗಳನ್ನು ಹೊಸ ಒಳನೋಟಗಳಿಂದ ನಿಮಗೆ ತಲುಪಿಸಬೇಕೆಂಬುದು ನಮ್ಮ ಆಶಯ. ಜೊತೆಗೆ ಕನ್ನಡದ ಹಿರಿಯ-ಕಿರಿಯ ಲೇಖಕರ ಬರಹಗಳನ್ನು ಸಹ ನಿಮಗಾಗಿ ಪ್ರಕಟಿಲಿದ್ದೇವೆ. ಕನ್ನಡದ ಹಿರಿಯ ಲೇಖಕರು, ಸಾಹಿತಿಗಳು, ಕವಿಗಳು ಮತ್ತು ಚಿಂತಕರ ಅನುಭವ, ಹೊಸ ತಲೆಮಾರಿನ ಕಿರಿಯರ ಉತ್ಸಾಹ, ಲವಲವಿಕೆ, ಆಧುನಿಕ ವಿಚಾರಧಾರೆ ಇಲ್ಲಿ ಮೇಳೈಸಲಿದೆ.
ಇಂದಿನ ರಾಜಕೀಯ, ಸಾಮಾಜಿಕ ತಲ್ಲಣಗಳು, ನಮ್ಮ ದೈನಂದಿನ ಬದುಕು, ಸಾಹಿತ್ಯ, ಸಿನೆಮಾ, ಕ್ರೀಡೆ, ಪ್ರವಾಸ, ರಂಗಭೂಮಿ, ಜನಪದ ಹೀಗೆ ಹತ್ತು ಹಲವು ಬಗೆಯ ಬರಹಗಳು ಇಲ್ಲಿರುತ್ತವೆ. ಕರಾವಳಿಯ ಸಮೃದ್ಧ ಭಾಷೆಗಳಾದ ತುಳು, ಕೊಂಕಣಿ ಮತ್ತು ಕನ್ನಡದ ವಿಶಿಷ್ಟ ಸೊಗಡಿನ ಕುಂದಾಪ್ರ ಕನ್ನಡಕ್ಕೂ ಇಲ್ಲಿ ಪ್ರತ್ಯೇಕ ವಿಭಾಗಗಳಿರುತ್ತವೆ. ಕರಾವಳಿಯ ಅದ್ಭುತ, ಮೈನವಿರೇಳಿಸುವ ಯಕ್ಷಗಾನ ಕಲೆಗಾಗಿಯೇ ಪ್ರತ್ಯೇಕ ಪುಟವೂ ಇದೆ. ಕರಾವಳಿ ಮತ್ತು ಸಮಸ್ತ ಕರ್ನಾಟಕದ ಕನ್ನಡಿಗರೂ ಸೇರಿದಂತೆ ಜಗತ್ತಿನಾದ್ಯಂತದ ಕನ್ನಡಿಗರನ್ನು ತಲುಪಲಿರುವ ನಮ್ಮ ಸುದ್ದಿ ತಾಣವನ್ನು ಕನ್ನಡಿಗರು ದಿನನಿತ್ಯವೂ ಭೇಟಿ ಕೊಡುವಂತೆ ಅತ್ಯಂತ ಆಕರ್ಷಕ ಮತ್ತು ಆಸಕ್ತಿಯ ಕುತೂಹಲಕರ ತಾಣವಾಗಿ ಮಾಡುವ ಎಲ್ಲ ಸಿದ್ಧತೆಗಳನ್ನೂ ನಾವು ಮಾಡಿಕೊಂಡಿದ್ದೇವೆ.
ಸುದ್ದಿ ಮತ್ತು ಬರಹಗಳ ಮೂಲಕ ಕರಾವಳಿ ಸೇರಿದಂತೆ ಕರ್ನಾಟಕದ ಜನರ ಇಂದು ನಾಳೆಗಳು ನೆಮ್ಮದಿ, ಶಾಂತಿ ಮತ್ತು ಸಮಾಧಾನಗಳಿಂದ ಸಮೃದ್ಧವಾಗಿರುವಂತೆ ಕಳಕಳಿಯಿಂದ ಕೆಲಸ ಮಾಡುವುದು ನಮ್ಮ ಗುರಿ. ಸ್ವಸ್ಥ, ಪ್ರಜ್ಞಾವಂತ ಸಮಾಜ ನಿರ್ಮಾಣ ನಮ್ಮ ಕನಸು. ಕನ್ನಡಿಗರಲ್ಲಿ, ಅದರಲ್ಲೂ ಯುವಜನರಲ್ಲಿ ವಿಶೇಷವಾದ ವೈಚಾರಿಕ ಪ್ರಜ್ಞೆ ಮೂಡಿಸುವುದು ಮತ್ತು ಓದುವ ಹೊಸ ಅಭಿರುಚಿಯನ್ನು ಬೆಳೆಸುವುದು ಸಹ ನಮ್ಮ ಆಶಯಗಳಲ್ಲಿ ಸೇರಿವೆ.