ಪ್ರಕೃತಿ ಒಲಿದರೆ ಚಾರ್ಮಾಡಿ ಶೀಘ್ರ ಸುಸ್ಥಿತಿಗೆ. ಇಲ್ಲವಾದಲ್ಲಿ ಕಷ್ಟ ಕಷ್ಟ!

ಆಗಾಗ ಸುರಿಯುತ್ತಿರುವ ಮಳೆ ಕಾಮಗಾರಿಯ ವೇಗಕ್ಕೆ ತಡೆಹಾಕುತ್ತಿದೆ.

ಅತಿಯಾದ ಒತ್ತಡ ಹಾಗೂ ಅವೈಜ್ಞಾನಿಕ ಕಾಮಗಾರಿ ಕುಸಿತಕ್ಕೆ ಕಾರಣ: ಶಿರಾಡಿ ಘಾಟಿಯಲ್ಲಿ ರಸ್ತೆ ಬಂದ್ ಆದ ಕಾರಣ ಉಂಟಾದ ಅತಿಯಾದ ವಾಹನಗಳ ಒತ್ತಡ ಹಾಗೂ ಘಾಟಿಯಲ್ಲಿ ಮಾಡಲಾಗಿರುವ ಅವೈಜ್ಞಾನಿಕ ಕಾಮಗಾರಿಗಳೇ ಘಾಟಿ ಕುಸಿಯಲು ಕಾರಣವಾಗಿದೆ.

ಬೆಳ್ತಂಗಡಿ: ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಬಾರೀ ಮಳೆ ಸುರಿಯುತ್ತಿದ್ದು ರಸ್ತೆಯ ವಿವಿದೆಡೆಗಳಲ್ಲಿ ಕುಸಿದು ಬಿದ್ದಿರುವ ಮಣ್ಣನ್ನು ಹಾಗೂ ಮರಗಳನ್ನು ತೆಗೆಯುವ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ ಆಗಾಗ ಸುರಿಯುತ್ತಿರುವ ಮಳೆ ಕಾಮಗಾರಿಯ ವೇಗಕ್ಕೆ ತಡೆಹಾಕುತ್ತಿದೆ.

ಘಾಟಿಯ ನಾಲ್ಕು ತಿರುವುಗಳಲ್ಲಿ ಭೂಕುಸಿತ ಸಂಭವಿಸಿದ್ದು ಆತಂಕ ಹೆಚ್ಚಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದರು.

ಚಾರ್ಮಾಡಿ ಘಾಟಿಯಲ್ಲಿ ಬಹುತೇಕ ಎಲ್ಲ ತಿರುವುಗಳಲ್ಲಿ ಭೂ ಕುಸಿತವಾಗಿದೆ. ಮೂರು, ನಾಲ್ಕು, ಆರು, ಏಳು ಹಾಗೂ ಒಂಬತ್ತನೇ ತಿರುವಿನಲ್ಲಿ ಗುಡ್ಡ ಕುಸಿದು ಬಿದ್ದಿದೆ. ಆರನೇ ತಿರುವಿನಲ್ಲಿ ರಸ್ತೆಯ ಕೆಳಭಾಗದ ತಡೆಗೋಡೆ ಕುಸಿಯಲಾರಂಭಿಸಿದೆ. ಅಲ್ಲಿ ಕಟ್ಟಿರುವ ತಡಗೋಡೆಯ ಕಲ್ಲುಗಳು ಬೀಳಲಾರಂಭಿಸಿದ್ದು ಇದನ್ನು ತಡೆಯದಿದ್ದರೆ ಅಪಾಯ ತಪ್ಪಿದ್ದಲ್ಲ. ಉಳಿದಂತೆ ಎಂಟನೇ ತಿರುವಿನಲ್ಲಿಯೂ ಕೆಳಭಾಗದ ತಡೆಗೋಡೆ ಕುಸಿಯುವ ಸ್ಥಿತಿಯಲ್ಲಿದ್ದು ಇಲ್ಲಿ ಕುಸಿತವಾದರೆ ಘಾಟಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಅಪಾಯವಿದೆ. ಘಾಟಿಯಲ್ಲಿ ಮಂಗಳವಾರ ಹಗಲು ರಾತ್ರಿ ಎಂಟು ಜೆಸಿಬಿಗಳು ಕಾರ್ಯನಿರ್ವಹಿಸಿದ್ದವು.

ಇಂದು ಹದಿಮೂರು ಜೆಸಿಬಿ ಯಂತ್ರಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಬಿದ್ದಿರುವ ಕಲ್ಲು ಮಣ್ಣನ್ನು ತೆಗೆಯುವ ಕಾರ್ಯ ಮಾಡಲಾಗುತ್ತಿದೆ. ಬಿದ್ದಿರುವ ಮರಗಳನ್ನು ಹಾಗೂ ರಸ್ತೆಬದಿಯಲ್ಲಿ ವಾಲಿಕೊಂಡಿರುವ ಬೀಳಲು ಸಿದ್ದವಾಗಿರುವ ಮರಗಳನ್ನು ತೆಗೆಯಲು ಅರಣ್ಯ ಇಲಾಖೆ ಆರಂಭಿಸಿದ್ದು ಇದನ್ನು ಪೂರ್ಣಗೊಳಿಸಲು ಒಂದೆರಡು ದಿನಗಳು ಬೇಕಾಗಲಿದೆ.

ಮಂಗಳವಾರ ರಾತ್ರಿ ಮಣ್ಣು ತೆಗೆಯುತ್ತಿದ್ದವೇಳೆ ಜೆಸಿಬಿ ಯಂತ್ರದ ಮೇಲೆ ಮಣ್ಣು ಕುಸಿದು ಬಿದ್ದಿದಿದೆ. ಅದರಿಂದಾಗಿ ತಡರಾತ್ರಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ರಾತ್ರಿಯ ವೇಳೆ ಅಪಾಯಕಾರಿ ಸ್ಥಳಗಳಲ್ಲಿ ಕಾಮಗಾರಿಗಳನ್ನು ನಡೆಸುವುದು ಅಸಾಧ್ಯವಾಗಿದ್ದು ಹಗಲು ಮಾತ್ರ ಕಾಮಗಾರಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಾಟಿಯಲ್ಲಿ ಭೂಕುಸಿತ ಹಾಗೂ ಕಾಮಗಾರಿಗಳಿಂದಾಗಿ ಬಹುತೇಕ ಕಡೆಗಳಲ್ಲಿ ಡಾಮರು ಕಿತ್ತುಹೋಗಿದೆ. ರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡದಾದ ಹೊಂಡಗಳು ಬಿದ್ದಿದ್ದು ವಾಹನಸಂಚಾರಕ್ಕೆ ತೊಡಕಾಗಲಿದೆ. ಚರಂಡಿಗಳು ಸಂಪೂರ್ಣವಾಗಿ ಮುಚ್ಚಿಹೋಗಿದ್ದು ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಅದರಿಂದಾಗಿ ರಸ್ತೆಯಲ್ಲಿರುವ ಹೊಂಡಗಳನ್ನು ಗುರುತಿಸುವುದು ಅಸಾಧ್ಯವಾಗಲಿದೆ.

ಬಾಂಜಾರು ಮಲೆಗೆ ಪ್ರತ್ಯೇಕ ವ್ಯವಸ್ಥೆ
ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನಲ್ಲಿರುವ ಬಾಂಜಾರು ಮಲೆ ಪ್ರದೇಶದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು ಇಲ್ಲಿನ ಜನರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾಲಾ ಕಾಲೇಜಿಗೆ ಹೋಗಲು ಅಧವಾ ಯಾವುದೇ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಅವರು ಘಾಟಿ ಇಳಿದು ಕಕ್ಕಿಂಜೆಗೆ ಬರಬೇಕಾಗಿದೆ. ಕಕ್ಕಿಂಜೆಯಿಂದ ಸುಮಾರು ಹದಿನಾರು ಕಲೋಮೀಟರ್ ದೂರದಲ್ಲಿ ಈ ಪ್ರದೇಶವಿದ್ದು ಒಂಬತ್ತನೆಯ ತಿರುವಿನಿಂದ ಅರಣ್ಯದ ಒಳಗೆ ಸುಮಾರು ಏಳು ಕಿ.ಮೀ ಸಂಚರಿಸಬೇಕಾಗಿದೆ. ಬಾಂಜಾರು ಮಲೆಗೆ ತೆರಳುವ ವಾಹನಗಳು ಘಾಟಿಯ ಮೂಲಕ ಹೋಗಲು ಅವಕಾಶ ಒದಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಬಾಂಜಾರುಮಲೆಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳ ಪರಿಶೀಲಿಸುವಂತೆ ಬೆಳ್ತಂಗಡಿ ತಹಶೀಲ್ದಾರರಿಗೆ ಪುತ್ತೂರು ಸಹಾಯಕ ಕಮೀಷನರ್ ಸೂಚನೆ ನೀಡಿದ್ದಾರೆ.

ಇಂದು ಚಾರ್ಮಾಡಿ ಘಾಟಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಪರಿಂಟೆಟ್ ಇಂಜಿನಿಯರ್ ರಾಘವನ್, ಪುತ್ತೂರು ಸಹಾಯಕ ಕಮೀಷನರ್ ಕೃಷ್ಣಮೂರ್ತಿ, ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಇಂಜಿನಿಯರ್ ಸುಬ್ಬಾರಾವ್, ಬೆಳ್ತಂಗಡಿ ತಹಶೀಲ್ದಾರ್ ಟಿ.ಸಿ ಹಾದಿಮನಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಅಯ್ಯಣ್ಣನವರ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಕಂದಾಯ ನಿರೀಕ್ಷಕ ರವಿ, ವಲಯಅರಣ್ಯಾಧಿಕಾರಿ ಸುಬ್ಬಯ್ಯನಾಯಕ್, ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅತಿಯಾದ ಒತ್ತಡ ಹಾಗೂ ಅವೈಜ್ಞಾನಿಕ ಕಾಮಗಾರಿ ಕುಸಿತಕ್ಕೆ ಕಾರಣ: ಶಿರಾಡಿ ಘಾಟಿಯಲ್ಲಿ ರಸ್ತೆ ಬಂದ್ ಆದ ಕಾರಣ ಉಂಟಾದ ಅತಿಯಾದ ವಾಹನಗಳ ಒತ್ತಡ ಹಾಗೂ ಘಾಟಿಯಲ್ಲಿ ಮಾಡಲಾಗಿರುವ ಅವೈಜ್ಞಾನಿಕ ಕಾಮಗಾರಿಗಳೇ ಘಾಟಿ ಕುಸಿಯಲು ಕಾರಣವಾಗಿದೆ. ಸರಕಾರ ದೊಡ್ಡ ಲಾರಿಗಳ ಹಾಗೂ ದೊಡ್ಡ ಬಸ್‍ಗಳ ಸಂಚಾರಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಆದರೆ ಅದನ್ನು ಮೀರಿ ಖಾಸಗಿ ಬಸ್‍ಗಳು ಹಾಗೂ ನಿಷೇಧಕ್ಕೆ ಒಳಗಾಗಿದ್ದ ಘನವಾಹನಗಳು ಘಾಟಿಯಮೂಲಕ ನಿರಂತರ ಸಂಚರಿಸುತ್ತಿದ್ದವು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕಳೆದ ಮೂರು ವರ್ಷಗಳಿಂದ ಘಾಟಿಯಲ್ಲಿ ಯಾವುದೇ ದೊಡ್ಡ ಭೂ ಕುಸಿತಗಳಾಗಿರಲಿಲ್ಲ, ಈ ಸಂದರ್ಬದಲ್ಲಿ ಹೆದ್ದಾರಿ ಪ್ರಾಧಿಕಾರದವರು ರಸ್ತೆಯನ್ನು ಸಾಧ್ಯವಾದಷ್ಟು ಅಗಲಗೊಳಿಸಲು ಪ್ರಯತ್ನಿಸಿದ್ದು ರಸ್ತೆಬದಿಯಲ್ಲಿ ಮಣ್ಣನ್ನು ತೆಗೆದಿದ್ದಾರೆ. ಈಸಂದರ್ಬದಲ್ಲಿ ಕಂಪನಕ್ಕೆ ಬಿರುಕುಗಳು ಸೃಷ್ಟಿಯಾಗಿದೆ. ವಾಹನಗಳ ಒತ್ತಡವೂ ಹೆಚ್ಚಾಗಿದ್ದಲ್ಲದೆ ಬಾರೀ ಮಳೆಯೂ ಸುರಿದಾಗ ಗುಡ್ಡಗಳು ಕುಸಿಯಲಾರಂಭಿಸಿದೆ.

ಉಜಿರೆಯಲ್ಲಿ ಚೆಕ್ ಪೋಸ್ಟ್
ಉಜಿರೆಯಲ್ಲಿ ಪೋಲೀಸ್ ಚೆಕ್‍ಪೋಸ್ಟ್ ಮಾಡಲಾಗಿದ್ದು ಅಲ್ಲಿಯೇ ವಾಹನಗಳನ್ನು ತಡೆದು ಬದಲಿ ರಸ್ತೆಗಳ ಮೂಲಕ ಕಳುಹಿಸಲಾಗುತ್ತಿದೆ ಆದರೆ ಕಣ್ಣು ತಪ್ಪಿಸಿ ಬದಲಿ ರಸ್ತೆಗಳ ಮೂಲಕವಾಗಿ ವಾಹನಗಳು ಚಾರ್ಮಾಡಿಯ ಅರಣ್ಯ ಇಲಾಖೆಯ ಗೇಟಿನ ವರೆಗೂ ಬಂದಿದ್ದು ಅಲ್ಲಿ ವಾಹನಗಳನ್ನು ತಡೆಯಲಾಗಿದೆ. ಗೇಟಿನ ಮುಂದೆ ಸುಮಾರು ಐವತ್ತಕ್ಕೂ ಹೆಚ್ಚು ಲಾರಿಗಳು ಸಾಲಾಗಿ ನಿಂತಿದ್ದವು. ಈ ವಾಹನಗಳನ್ನು ಹಿಂದಕ್ಕೆ ಕಳುಹಿಸುವ ಕಾರ್ಯ ಮಾಡಲಾಗುತ್ತಿದೆ.

ತ್ವರಿತವಾಗಿ ಕಾಮಗಾರಿ ನಡೆಯುತ್ತಿದ್ದು ರಸ್ತೆಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಅದನ್ನೂ ಮಾಡಲಾಗುತ್ತಿದ್ದು ಗುರುವಾರ ಸಂಜೆಯೊಳಗೆ ಕಾಮಗಾರಿ ಮುಗಿಸುವ ಗುರಿಯಿದೆ. ನಾಳೆ ಸಂಜೆ ಒಟ್ಟು ಸ್ಥಿತಿಗತಿಗಳನ್ನು ಪರಿಶೀಲಿಸಿದ ಬಳಿಕ ವಾಹನ ಸಂಚಾರ ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.
ಕೃಷ್ಣಮೂರ್ತಿ ಸಹಾಯಕ ಕಮೀಷನರ್, ಪುತ್ತೂರು.

ಮಳೆ ಇನ್ನೂ ಮುಂದುವರಿದಿದ್ದು ಮಣ್ಣು ತೆಗೆಯುವ ಕಾಮಗಾರಿ ನಡೆಯುತ್ತಿದೆ. ಇದರ ನಡುವೆಯೇ ಅಲ್ಲಲ್ಲಿ ಕುಸಿತಗಳು ಸಂಭವಿಸುತ್ತಿದ್ದು ಕಾಮಗಾರಿ ನಿಧಾನವಾಗುತ್ತಿದೆ. ಪ್ರಕೃತಿ ಒಲಿದರೆ ಒಂದೆರಡು ದಿನದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ತೆರೆಯಲಾಗುವುದು. ಮಳೆ ಮುಂದುವರಿದರೆ ಅಧವಾ ಹೆಚ್ಚಿನ ಪ್ರದೇಶಗಳಲ್ಲಿ ಭೂ ಕುಸಿತಗಳಾದರೆ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಲು ಹೆಚ್ಚು ಸಮಯ ಬೇಕಾಗಬಹುದು.
ರಾಘವನ್, ಸುಪರಿಂಟೆಟ್ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ.

ಸುತ್ತಿಬಳಸಿ ಸಂಚರಿಸುತ್ತಿರುವ ಸಾರಿಗೆ ಬಸ್‍ಗಳು: ರಾಜ್ಯ ಸಾರಿಗೆ ಸಂಸ್ಥೆಯ ಧರ್ಮಸ್ಥಳ ಡಿಪ್ಪೋದ ಬಸ್‍ಗಳು ಸುತ್ತಿಬಳಸಿ ಸಂಚರಿಸುತ್ತಿದೆ. ಧರ್ಮಸ್ಥಳದಿಂದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹೊಸಪೇಟೆ ಪ್ರದೇಶಗಳಿಗೆ ಹೋಗುವ ಬಸ್‍ಗಳು ನಾರಾವಿ, ಬಜಗೋಳಿ, ಮರ್ಗವಾಗಿ ಸಂಚರಿಸುತ್ತಿದೆ. .

Get real time updates directly on you device, subscribe now.