ಕೃಷಿ ಭೂಮಿಗೆ ನೀರು ನುಗ್ಗಿ ಸುಮಾರು 25 ಎಕ್ರೆ ಕೃಷಿ ನಾಶ

ತಾಲೂಕು ಕಾಶಿಪಟ್ಣ ಗ್ರಾ.ಪಂ ವ್ಯಾಪ್ತಿಯ ಕಿರೋಡಿ ಕಿರಿಂಗಲ್ ಪ್ರದೇಶದದಲ್ಲಿ ತೋಡಿನ ದಂಡೆಯೊಡೆದು ಕೃಷಿ ಭೂಮಿಗೆ ನೀರು ನುಗ್ಗಿ ಸುಮಾರು 25 ಎಕ್ರೆ ಕೃಷಿ ಭೂಮಿಯಲ್ಲಿ ಮಾಡಲಾಗಿದ್ದ ಬತ್ತದ ಕೃಷಿ ನಾಶಗೊಂಡಿದೆ.

ಬೆಳ್ತಂಗಡಿ: ತಾಲೂಕು ಕಾಶಿಪಟ್ಣ ಗ್ರಾ.ಪಂ ವ್ಯಾಪ್ತಿಯ ಕಿರೋಡಿ ಕಿರಿಂಗಲ್ ಪ್ರದೇಶದದಲ್ಲಿ ತೋಡಿನ ದಂಡೆಯೊಡೆದು ಕೃಷಿ ಭೂಮಿಗೆ ನೀರು ನುಗ್ಗಿ ಸುಮಾರು 25 ಎಕ್ರೆ ಕೃಷಿ ಭೂಮಿಯಲ್ಲಿ ಮಾಡಲಾಗಿದ್ದ ಬತ್ತದ ಕೃಷಿ ನಾಶಗೊಂಡಿದೆ.

ಭತ್ತದ ಕೃಷಿಯನ್ನೇ ನಂಬಿ ಕಳೆದ ಹಲವಾರು ವರ್ಷಗಳಿಂದ ಇಲ್ಲಿನ 15 ಕುಟುಂಬಗಳು ಜೀವನ ಸಾಗಿಸುತ್ತಿದ್ದು ಆದರೆ ಈ ಬಾರಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಪ್ರಕೃತಿಯ ಮುನಿಸೂ ಸೇರಿದಾಗ ಭತ್ತದ ಕೃಷಿ ಮಾಡಲಾಗದೇ ಕಂಗಾಲಾಗಿದೆ ಈ ಕುಟುಂಬಗಳು.

ಕಳೆದ ಒಂದು ತಿಂಗಳ ಹಿಂದೆ ಸುರಿದ ಬಾರಿ ಮಳೆಗೆ ಗದ್ದೆಯ ಬಳಿ ಇರುವ ತೋಡಿನ ದಂಡೆ ಒಡೆದು ಮಳೆ ನೀರು ಗದ್ದೆಗೆ ಹರಿಯುತ್ತಿತ್ತು ಇದನ್ನು ಸರಿಪಡಿಸುವಂತೆ ಸ್ಥಳೀಯ ಪಂಚಾಯತ್, ಗ್ರಾಮ ಕರಣಿಕರು ಕಂದಾಯ ಅಧಿಕಾರಿಗಳಿಗೆ, ತಹಶಿಲ್ದಾರರಿಗೆ, ಕೃಷಿ ಇಲಾಖೆ, ಜಲಾನಯನ ಇಲಾಖೆಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಗದಂತಾಗಿದೆ. ಇದರಿಂದಾಗಿ ಕೃಷಿ ಮಾಡಲು ಸಾಧ್ಯವಿಲ್ಲದ ಸ್ಥಿತಿ ಬಂದಾಗ ಇವರೆಲ್ಲರೂ ಸೇರಿ ಗದ್ದೆಗೆ ಹರಿಯುತ್ತಿದ್ದ ನೀರಿಗೆ ಮರಳು ಚೀಲ ಹಾಕಿ ತಡೆಗೋಡೆಯನ್ನು ನಿರ್ಮಸಿದ್ದಾರೆ.

ಒಂದು ತಿಂಗಳ ಹಿಂದೆಯೇ ತಮ್ಮ ಅಂಗಳದಲ್ಲಿ ಇವರು ನೇಜಿ ಹಾಕಿದ್ದು ಇದು ಇದೀಗ ಬೆಳೆದು ನಿಂತಿದೆ. ಕೆಲ ಕುಟುಂಬಗಳು ವಾರದ ಹಿಂದೆ ಮಳೆ ಕಡಿಮೆಯಾಗಿದೆ ಎಂದು ಗದ್ದೆಯಲ್ಲಿ ಉಳುಮೆ ಮಾಡಿ ನಾಟಿಯನ್ನೂ ಮಾಡಿದ್ದರು. ಕಳೆದೆರಡು ದಿನಗಳ ಮಳೆಗೆ ಜನರು ತಾತ್ಕಾಲಿಕವಾಗಿ ನಿರ್ಮಿಸಿದ್ದ ತಡೆಗೋಡೆ ಕೊಚ್ಚಿಹೋಗಿದ್ದು ನೀರು ಗದ್ದೆಗೆ ನುಗ್ಗಿ ಮಾಡಿದ್ದ ನಾಟಿಯನ್ನು ಕೊಚ್ಚಿಕೊಂಡು ಹೋಗಿದೆ. ಉಳಿದವರು ಕೃಷಿ ಮಾಡಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಜಲಾನಯನ ಇಲಾಖೆ ಹಾಗೂ ಗ್ರಾಮ ಕರಣಿಕರು ಒಂದೆರಡು ಸ್ಥಳಕ್ಕೆ ಭೇಟಿ ನೀಡಿ ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ಹೋದವರು ಮತ್ತೆ ವಾಪಾಸ್ ಬರಲಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ಕುಟುಂಬಗಳು. ತಹಶಿಲ್ದಾರರಿಗೆ ಕರೆ ಮಾಡಿದರೂ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂಬ ಭರವಸೆ ಹೊರತು ಇದುವರೆಗೆ ಯಾರೂ ಭೇಟಿ ನೀಡಲಿಲ್ಲ.

ಕಳೆದ ಒಂದು ತಿಂಗಳಿನಿಂದ ತಮ್ಮ ನೋವನ್ನು ಅಧಿಕಾರಿಗಳಿಗೆ, ಜನಪ್ರತಿನಿದಿಗಳಿಗೆ ತಿಳಿಸಿದರೂ ಯಾವುದೇ ಮೇಲಾಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಬಂದು ಧೈರ್ಯ ತುಂಬಲಿಲ್ಲ. ಇದೀಗ ನೇಜಿ ಬೆಳೆದು ನಿಂತಿದ್ದು ಬೇಸಾಯ ಮಾಡಲು ಇನ್ನೂ ಸಾಧ್ಯವಿಲ್ಲದಾದರೂ ಮುಂದಿನ ಸುಗ್ಗಿ ಬೆಳೆ ಮಾಡಲು ಸಹಗಕಾರಿಯಾಗುವಂತೆ ಅಧಿಕಾರಿಗಳು ಜನಪ್ರತಿನಿದಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕಿಂಡಿ ಅಣೆಕಟ್ಟೇ ಸಮಸ್ಯೆಯ ಮೂಲ
ಈ ಗದ್ದೆ ಬಳಿ ಇರುವ ತೋಡಿಗೆ ಸಾರ್ವಜನಿಕರಿಗೆ ಹೋಗಲು ಕಾಲು ಸಂಕಕ್ಕೆ ಮನವಿ ನೀಡಿದ್ದು ಇಲಾಖೆ ಕಿಂಡಿ ಅಣೆಕಟ್ಟು ನಿರ್ಮಿಸಿದೆ. ಕಿಂಡಿ ಅಣೆಕಟ್ಟೇ ಇದೀಗ ಅನಾಹುತಕ್ಕೆ ಕಾರಣವಾಗಿದೆ. ಕಿರಿದಾದ ತೋಡು ಇದಾಗಿರುವುದರಿಂದ ಕಿಂಡಿ ಅಣೆಕಟ್ಟುವಿನಲ್ಲಿ ಕಸ ಕಡ್ಡಿಗಳು ತುಂಬಿಕೊಳ್ಳುತ್ತಿದೆ. ಇದರಿಂದಾಗಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಅಲ್ಲಲ್ಲಿ ನೀರು ತೋಡಿನ ದಂಡೆಯನ್ನು ಒಡೆದು ನುಗ್ಗುತ್ತಿದೆ.

ಭತ್ತದ ಕೃಷಿಯನ್ನೇ ನಂಬಿದ ನಾವು ಇಂದು ಮಳೆನೀರು ಗದ್ದೆಗೆ ಹರಿದಿರುವುದರಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಇಲಾಖೆಗೆ ಮನವಿ ನೀಡಿದರೂ ಸ್ಪಂದನೆ ನಮಗೆ ಸಿಗಲಿಲ್ಲ. ಕೂಡಲೇ ಮೇಲಾಧಿಕಾರಿಗಳು ನಮ್ಮ ಸ್ಪಂದನೆಗೆ ಶೀಘ್ರ ಸ್ಪಂದಿಸಿ ಕೃಷಿ ಮಾಡಲು ಅನುಕೂಲ ಮಾಡಿಕೊಡಬೆಕು. ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳನ್ನೇ ನಂಬಿ ದಿನ ಕಳೆಯುತ್ತಿದ್ದೇವೆ.,
ಅರುಣ್ ಶೆಟ್ಟಿ
ನೊಂದ ಕೃಷಿಕ

Get real time updates directly on you device, subscribe now.