ಮಂಗಳೂರು: ಕ್ವಾರಂಟೈನ್ ಗರ್ಭಿಣಿಗೆ ಸಿಗದ ಚಿಕಿತ್ಸೆ, ಮಗು ಸಾವು

ಜಿಲ್ಲಾಡಳಿತ ಒಂದೊಮ್ಮೆ ಮನಸ್ಸು ಮಾಡಿದ್ದರೆ ಗರ್ಭಿಣಿಗೆ ಸೂಕ್ತ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಬಹುದಿತ್ತು ಎಂದು ಮಹಿಳೆಯ ಸಹೋದರ ಮಾವ ಅಝೀಝ್ ಬಸ್ತಿಕರ್ ಗಾಢ ಬೇಸರ, ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಮಹಿಳೆಗೆ ಅನ್ಯಾಯವಾಗಿದ್ದರೆ ದೂರು ನೀಡಲಿ, ತನಿಖೆಗೆ ಸಿದ್ದ’ ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅವರು ಘಟನೆಗೆ ಪ್ರತಿಕ್ರಿಯಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿ ಮಹಿಳೆಗೆ ಕ್ಲಪ್ತ ಸಮಯಕ್ಕೆ ಚಿಕಿತ್ಸೆ ಲಭಿಸದೇ ಹೊಟ್ಟೆಯಲ್ಲಿದ್ದ ಮಗು ಸಾವಪ್ಪಿದ ಘಟನೆ ವರದಿಯಾಗಿದೆ.

ಜಿಲ್ಲಾಡಳಿತ ಒಂದೊಮ್ಮೆ ಮನಸ್ಸು ಮಾಡಿದ್ದರೆ ಗರ್ಭಿಣಿಗೆ ಸೂಕ್ತ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಬಹುದಿತ್ತು. ಅಧಿಕಾರಿಗಳ ಪರಿಚಯವಿರುವ ನಮ್ಮಂಥವರ ಪರಿಸ್ಥಿತಿಯೇ ಹೀಗಾದರೆ ಸಾಮಾನ್ಯರ ಗತಿ ಏನು ಎಂದು ಈ ಘಟನೆಯಿಂದ ತಿಳಿಯಬಹುದು. ಇಂಥ ಪರಿಸ್ಥಿತಿ ಬೇರೆ ಯಾರಿಗೂ ಬಾರದಿರಲಿ ಎಂದು ಮಹಿಳೆಯ ಸಹೋದರ ಮಾವ ಅಝೀಝ್ ಬಸ್ತಿಕರ್ ಗಾಢ ಬೇಸರ, ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಗರ್ಭಿಣಿಯ ಪ್ರಥಮ ಕೋವಿಡ್ ಟೆಸ್ಟ್ ವರದಿ ನೆಗೆಟಿವ್ ಬಂದ ತಕ್ಷಣ ಅವರನ್ನು ಹೋಂ ಕ್ವಾರಂಟೈನ್‌ಗೆ ಕಳಿಸಿದ್ದೇವೆ. ಅವರನ್ನು ಯಾಕೆ ಫ್ಲ್ಯಾಟ್‌ಗೆ ಸೇರಿಸಿಕೊಂಡಿಲ್ಲ ಎಂಬ ಬಗ್ಗೆ  ತನಿಖೆ ನಡೆಸುತ್ತೇವೆ.ಯಾಕೆ ವೈದ್ಯರು ಚಿಕಿತ್ಸೆ ನೀಡಿಲ್ಲ ಎಂಬ ಬಗ್ಗೆಯೂ ತನಿಖೆ ನಡೆಸುತ್ತೇವೆ. ಯಾವ ಆಸ್ಪತ್ರೆಯವರು ಚಿಕಿತ್ಸೆಗೆ ದಾಖಲಿಸಿಕೊಂಡಿಲ್ಲ ಎಂಬ ಬಗ್ಗೆಯೂ ತನಿಖೆಗೆ ಸಿದ್ದ. ಮಹಿಳೆಗೆ ಅನ್ಯಾಯವಾಗಿದ್ದರೆ ದೂರು ನೀಡಲಿ ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅವರು ಘಟನೆಗೆ ಪ್ರತಿಕ್ರಿಯಿಸಿದ್ದಾರೆ.

ದುಬೈಯಿಂದ ಪ್ರಥಮ ವಿಮಾನದಲ್ಲಿ ಮೇ.12ರ ರಾತ್ರಿ 10ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆ ಜಿಲ್ಲಾಡಳಿತ ಬೇಜವಾಬ್ದಾರಿಯಿಂದ ಮೂರು ಗಂಟೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಕ್ವಾರಂಟೈನ್‌ಗೆ ಒಳಗಾಗಲು ಕಾದು ಕುಳಿತು ಕೊಳ್ಳುವಂತಾಗಿತ್ತು. ಈ ಸಂದರ್ಭ ಯಾವುದೇ ಸಾಮಾಜಿಕ ಅಂತರವೂ ಇರಲಿಲ್ಲ. ಈ ರೀತಿ ಕಾಯಿಸಿ ಕೊನೆಗೂ ಬೆಳಗಿನ ಜಾವ 3:30ಗೆ ಹೊಟೇಲ್ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಮರುದಿನ ನಡೆಸಿದ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೋನಾ ನೆಗೆಟಿವ್ ಫಲಿತಾಂಶ ಬಂದಿತ್ತು.

ವೈದ್ಯರು ಬರಬೇಕಿದ್ದರೆ ಹಲವು ಬಾರಿ ಕರೆ ಮಾಡಿ ಒತ್ತಡ ಹಾಕಬೇಕಾಗುತ್ತಿತ್ತು. ಮೈಮುಟ್ಟಿ ಬಿಪಿ ಚೆಕ್ ಮಾಡಲು ಮನಸಿಲ್ಲದ ವೈದ್ಯರು ಬಿಪಿ ಚೆಕ್ ಕೆಟ್ ಮರೆತು ಬಂದು ಬಿಡುತ್ತಿದ್ದರು. ಈ ಕಾರಣಕ್ಕೆ ವೈದ್ಯರಿಗೆ ಕರೆ ಮಾಡಿ ಬರಲು ಒತ್ತಡ ಹೇರಿದಾಗ ಬಿಪಿ ಟೆಸ್ಟ್ ಕಿಟ್ ತರುವಂತೆ ನೆನಪಿಸಬೇಕಾಗುತ್ತಿತ್ತು. ಜಿಲ್ಲಾಡಳಿತ ವೈದ್ಯರು, ದಾದಿಯರ ಎಲ್ಲ ವ್ಯವಸ್ಥೆ ಇದೆ ಎಂದು ಹೇಳಿಕೊಂಡಿದ್ದರೂ ವಾಸ್ತವದಲ್ಲಿ ಪರಿಸ್ಥಿತಿ ಹೀಗಿತ್ತು.

ಫ್ರಥಮ ಕೊರೋನಾ ತಪಾಸಣೆ ವರದಿ ನೆಗೆಟಿವ್ ಬಂದರೆ ಗರ್ಭಿಣಿಯರಿಗೆ ಹೋಂ ಕ್ವಾರಂಟೈನ್ ಮಾಡಬಹುದೆಂಬ ಸರಕಾರಿ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಪತ್ರ ಪಡೆದು ಶಿವಭಾಗ್ ಬಳಿ ಫ್ಲ್ಯಾಟ್‌ಗೆ ಗರ್ಭಿಣಿಯನ್ನು ಕರೆದುಕೊಂಡು ಹೋಗಲು ಪೊಲೀಸ್ ಅಧಿಕಾರಿಗಳಿರುವ ಆ ಫ್ಲ್ಯಾಟ್ ನಿವಾಸಿಗಳು ನಿರಾಕರಿಸಿ ತಮ್ಮ ಅಮಾನವೀಯತೆಯನ್ನು ತೋರಿಸಿದರು.

ಹೀಗಾಗಿ ಅಸಹಾಯಕರಾಗಿ ಹದಿನಾಲ್ಕು ದಿನ ಎರಡನೆ ಕೊರೋನ ಪರೀಕ್ಷೆ ನೆಗೆಟಿವ್ ಬರುವ ತನಕ ಕಾಯಬೇಕಾಯಿತು. ಎರಡನೆ ಪರೀಕ್ಷೆ ನೆಗೆಟಿವ್ ಬಂದ ಬಳಿಕವೇ ಹೊಟೇಲ್ ಬಾಡಿಗೆ 60ಸಾವಿರ ಪಾವತಿಸಿ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಬಂದಾಗ ಗರ್ಭಿಣಿಯ ಪರೀಕ್ಷೆ ನಡೆಸಿದ ವೈದ್ಯರು ಪರಿಸ್ಥಿತಿ ಗಂಭೀರವಿದ್ದು, ತಾಯಿಯ ಜೀವ ಉಳಿಸಲು ಹೆರಿಗೆ ಮಾಡುವುದು ಅಗತ್ಯ ಎಂದರು. ಮಗು ಹೊಟ್ಟೆಯಲ್ಲೇ ಸಾವಪ್ಪಿತ್ತು.

ದುಬೈನಲ್ಲಿ ಪತಿಯೊಂದಿಗೆ ನೆಲೆಸಿದ್ದ ಸಂದರ್ಭದಲ್ಲಿ ಮಗುವಿನ ಅಸಹಜ ಬೆಳವಣಿಗೆ ಹಿನ್ನೆಲೆಯಲ್ಲಿ ಮಂಗಳೂರಿಗೆ ಬರುವ ಮುಂಚೆಯೇ ಫಳ್ನೀರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯರನ್ನು ಕೋರಲಾಗಿತ್ತು. ಆದರೆ ವೈದ್ಯರು ಮೊದಲ ಟೆಸ್ಟ್ ವರದಿ ನೆಗೆಟಿವ್ ಬಂದರೆ ಮಾತ್ರ ಚಿಕಿತ್ಸೆ ಕೊಡುವುದಾಗಿ ಮೊದಲು ಒಪ್ಪಿಕೊಂಡಿದ್ದು, ಆ ಬಳಿಕ ಹದಿನಾಲ್ಕು ದಿನ ಕಳೆದರೆ ಮಾತ್ರ ಚಿಕಿತ್ಸೆ ನೀಡುತ್ತೇನೆ ಎಂದರು. ಅನೇಕ ವೈದ್ಯರನ್ನು ಈ ಬಗ್ಗೆ ವಿನಂತಿಸಿದರೂ ಬರಲು ಒಪ್ಪಲಿಲ್ಲ. ತೀವೃ ನಿಗಾ ವಿಭಾಗ ನಮ್ಮಲ್ಲಿ ಇಲ್ಲ ಎಂದು ಮಹಿಳೆಯನ್ನು ದಾಖಲಿಸಲು ನಿರಾಕರಿಸಿದರು ಎಂದು ಮಹಿಳೆಯ ಸಹೋದರ ಮಾವ ಅಝೀಝ್ ಬಸ್ತಿಕರ್ ಅವರು ತಮ್ಮ ಅಸಹಾಯಕ ಪರಿಸ್ಥಿತಿಯನ್ನು ಹೇಳಿ ಕಂಬನಿ ಮಿಡಿದಿದ್ದಾರೆ.

ಝೀನತ್ ಬಕ್ ಮಸೀದಿ ಖಬರಸ್ಥಾನದಲ್ಲಿ ಮೃತ ಮಗುವನ್ನು ಮಣ್ಣು ಮಾಡಲಾಗಿದೆ.

Get real time updates directly on you device, subscribe now.