ದುಬೈಯಿಂದ ಬಂದ ಕ್ವಾರಂಟೈನ್  ಗರ್ಭಿಣಿಗೆ ಹಿಂಸೆ: ತನಿಖೆಗೆ ಜಿಲ್ಲಾಧಿಕಾರಿ ಆದೇಶ

ತನಿಖೆಗೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್, ನೇತೃತ್ವದ ಒಂಬತ್ತು ಮಂದಿಯ ಸಮಿತಿಯನ್ನು ದ.ಕ. ಜಿಲ್ಲಾಧಿಕಾರಿ ನೇಮಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಮೇ.12ರಂದು ಮಂಗಳೂರಿಗೆ ಬಂದ ಪ್ರಥಮ ವಿಮಾನದಲ್ಲಿದ್ದ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧ ಅವರಿಗೆ ಆದ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಸಂಬಂಧಿಸಿ ತನಿಖೆಗೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್, ನೇತೃತ್ವದ ಒಂಬತ್ತು ಮಂದಿಯ ಸಮಿತಿಯನ್ನು ದ.ಕ. ಜಿಲ್ಲಾಧಿಕಾರಿ ನೇಮಿಸಿದ್ದಾರೆ.

ಹೊಟೇಲ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ಸೂಕ್ತ ಸಮಯದಲ್ಲಿ ಲಭ್ಯವಾಗದ ಕಾರಣ, ಖಾಸಗಿ ಆಸ್ಪತ್ರೆ ದಾಖಲಾತಿಗೂ ಅವಕಾಶ ಸಿಗದಿರುವುದರಿಂದ ಹೊಟ್ಟೆಯಲ್ಲೇ ಮಗು ಸಾವಪ್ಪಿತ್ತು. ಮಹಿಳೆಯ ಸಹೋದರ ಮಾವ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ನಿವಾಸಿ ಅಬ್ದುಲ್ ಅಜೀಝ್ ಬಸ್ತಿಕಾರ್ ಅವರು ಇದಕ್ಕೆ ಜಿಲ್ಲಾಡಳಿತದ ಬೇಜವಾಬ್ದಾರಿ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದರು. ಲೇಡಿಗೋಶನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ ಕಾರಣ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.

ಕ್ವಾರಂಟೈನ್ ಅವಧಿ ಮುಗಿದ ಬಳಿಕ ಗರ್ಭಿಣಿ ವಾಸಿಸುತ್ತಿದ್ದ ಶಿವಭಾಗ್ ಅಪಾರ್ಟ್ಮೆಂಟ್‌ಗೆ ಹೋಗಲು ಬಯಸಿದಾಗ ಅವಕಾಶ ನೀಡದೇ ಅಮಾನವೀಯತೆ ತೋರಿದ್ದು ಈ ಸಂದರ್ಭ ಬೆಳಕಿಗೆ ಬಂದಿತ್ತು. ಈ ಬಗ್ಗೆ ಕೂಡ ಅಬ್ದುಲ್ ಅಜೀಝ್ ಅವರು ಡಿಸಿಗೆ ಸೂಚನೆಯಂತೆ ದೂರು ನೀಡಿದ್ದರು.

ಇದೀಗ ಮನಪಾ ಆಯುಕ್ತರು ಮಹಿಳೆಗೆ ಅಪಾರ್ಟ್ಮೆಂಟ್ ಪ್ರವೇಶಕ್ಕೆ ಅವಕಾಶ ನೀಡುವಂತೆ, ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಅಪಾರ್ಟ್ಮೆಂಟ್ ಅಧ್ಯಕ್ಷರಿಗೆ ನೋಟೀಸ್ ನೀಡಿದ್ದಾರೆ.

 

Get real time updates directly on you device, subscribe now.