ಕಾಸರಗೋಡು ಬಿಜೆಪಿಯಿಂದ ದ.ಕ ಬಿಜೆಪಿ ವಿರುದ್ಧ ಪ್ರತಿಭಟನೆ

ದ.ಕ ಉಸ್ತುವಾರಿ ಸಚಿವರು , ಶಾಸಕರು, ಸಂಸದರು ಕೆಲವು ಕಾರಣಗಳಿಗಾಗಿ ಗಡಿಯನ್ನು ಪೂರ್ತಿಯಾಗಿ ಸಂಚಾರಕ್ಕೆ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ತಿಳಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕಾಸರಗೋಡು: ದ.ಕ ಗಡಿಯಲ್ಲಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡುವಂತೆ ಆಗ್ರಹಿಸಿ ಮಂಜೇಶ್ವರ ಬಿಜೆಪಿ ಮಂಡಲ ಸಮಿತಿ ದ.ಕ ಜಿಲ್ಲಾಡಳಿತ ವಿರುದ್ಧ ತಲಪಾಡಿಯಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದೆ.

ಲಾಕ್‌ಡೌನ್ ಸಡಿಲಗೊಂಡರೂ ತಲಪಾಡಿ ಗಡಿ ಸಂಚಾರಕ್ಕೆ ತೆರವುಗೊಳ್ಳದ ಹಿನ್ನೆಲೆಯಲ್ಲಿ ಮತ್ತು ಉದ್ಯೋಗಿಗಳ ನಿತ್ಯ ಸಂಚಾರದ ಪಾಸ್ ಸಮರ್ಪಕವಾಗಿ ವಿತರಣೆಗೊಳ್ಳದ ಹಿನ್ನೆಲೆಯಲ್ಲಿ ಕಾಸರಗೋಡು ಬಿಜೆಪಿಗರ ಆಕ್ರೋಶ ಸ್ಫೋಟಗೊಂಡಿದೆ.

ಕುಂಜತ್ತೂರಿನಿಂದ ನಡೆದು ತಲಪಾಡಿಗೆ ಬಂದ ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ವಕೀಲ ಶ್ರೀಕಾಂತ್ ಮತ್ತು ಇತರ ಮುಖಂಡರನ್ನು ಮಂಜೇಶ್ವರ ಪೊಲೀಸರು ತಡೆದಿದ್ದು, ನಂತರ ತೆರಳಲು ಅವಕಾಶ ನೀಡಿದರು. ತಲಪಾಡಿ ಚೆಕ್ ಪೋಷ್ಠ್ ಬಳಿ ಬಿಜೆಪಿ ಧ್ವಜ ಹಿಡಿದು ಪ್ರತಿಭಟಿಸಿದ್ದಾರೆ.

ಕಾಸರಗೋಡಿನಿಂದ ಮಂಗಳೂರಿಗೆ ತೆರಳುವವರಿಗೆ ಜಿಲ್ಲಾಡಳಿತ ನಿತ್ಯ ಪಾಸ್ ಬೇಗ ವಿತರಿಸುವ ಭರವಸೆ ನೀಡಿದೆ ಎಂದು ಶ್ರೀಕಾಂತ್ ತಿಳಿಸಿದರು. ದ.ಕ ಉಸ್ತುವಾರಿ ಸಚಿವರು , ಶಾಸಕರು, ಸಂಸದರು ಕೆಲವು ಕಾರಣಗಳಿಗಾಗಿ ಗಡಿಯನ್ನು ಪೂರ್ತಿಯಾಗಿ ಸಂಚಾರಕ್ಕೆ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ ಎಂದರು.

ದ.ಕ ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದ, ಶಾಸಕರು ಕೊರೋನಾ ಹಬ್ಬುವ ಭೀತಿಯಲ್ಲಿ ಹಿಂದೆ ಗಡಿ ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದು, ಕೇರಳ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ವೈದ್ಯಕೀಯ ತುರ್ತು ಅಗತ್ಯಗಳಿಗೆ ಪಾಸ್ ಮೂಲಕ ಗಡಿ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಈಗ ಲಾಕ್ಡೌನ್ ಸಡಿಲಗೊಂಡರೂ ಗಡಿಯನ್ನು ಸಂಚಾರಕ್ಕೆ ಪೂರ್ತಿ ಮುಕ್ತಗೊಳಿಸದ ಹಿನ್ನೆಲೆಯಲ್ಲಿ ಕಾಸರಗೋಡು ಬಿಜೆಪಿ ಮುಖಂಡರು ಪ್ರತಿಭಟಿಸಿದ್ದಾರೆ.

ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ನೇತೃತ್ವದಲ್ಲಿ ಮಂಡಲ ಅಧ್ಯಕ್ಷ ಮಣಿಕಾಂತ ರೈ, ಜಿಲ್ಲಾ ಕಾರ್ಯದರ್ಶಿ ಸುಧಾಮ, ಕೋಳಾರು ಸತೀಶ್ಚಂದ್ರ ಭಂಡಾರಿ, ಸತ್ಯಶಂಕರ ಭಟ್, ನವೀನ್ ರಾಜ್ ಕೆ ಜೆ, ವಿಜಯ ಕುಮಾರ್ ರೈ, ಸದಾನಂದ ರೈ ಮುಂತಾದ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Get real time updates directly on you device, subscribe now.