ದ.ಕ. ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ: ಪೊಲೀಸರಿಂದ ಸ್ವಯಂಪ್ರೇರಿತ ಕೇಸ್
ಯಾವುದೇ ಅಕ್ರಮ ಜಾನುವಾರು ಸಾಗಾಟ ಕಂಡುಬಂದರೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ. ಜನರು ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಡಳಿತ ಟ್ವೀಟ್.
ಜಾನುವಾರು ಸಾಗಾಟಗಾರರನ್ನು ತಡೆದು ಹಲ್ಲೆಗೈದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ.
ಕರಾವಳಿ ಕರ್ನಾಟಕ ವರದಿ
ಮಂಗಳೂರು: ಜಾನುವಾರು ಸಾಗಾಟಗಾರರನ್ನು ತಡೆದು ಹಲ್ಲೆಗೈದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಒಡ್ಡಿದ ವ್ಯಕ್ತಿಯ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ವಾಟ್ಸ್ಯಾಪ್ ಗ್ರೂಪ್ ಒಂದರಲ್ಲಿ ಒಬ್ಬಾತ ‘ಹಿಂದುತ್ವಕ್ಕಾಗಲೀ, ದೇವರಿಗಾಗಲಿ ಯಾರಾದರೂ ಧಕ್ಕೆ ಮಾಡುವ ಕೆಲಸ ಮಾಡಿದರೆ ಅವರ ಪ್ರಾಣ ತೆಗೆಯಲೂ ಸಿದ್ಧ, ಪ್ರಾಣ ಕೊಡಲೂ ಸಿದ್ಧ’ ಎಂದು ತುಳುವಿನಲ್ಲಿ ಬೆದರಿಕೆ ಒಡ್ಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಗಮನ ಸೆಳೆದಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಉಪ ಆಯುಕ್ತ(ಡಿಸಿಪಿ-ಕಾನೂನು ಸುವವಸ್ಥೆ) ಅರುಣಾಂಶಗಿರಿಯವರು ಸ್ವಯಂಪ್ರೇರಿತ ಪ್ರಕರಣವನ್ನು ಪೊಲೀಸರು ಈ ಬಗ್ಗೆ ದಾಖಲಿಸಲಿದ್ದಾರೆ. ಈಗಾಗಲೇ ತನಿಖೆ ಆರಂಭಗೊಂಡಿದೆ. ಇಂಥ ಬೆದರಿಕೆಗಳನ್ನು ನಿರ್ಲಕ್ಷಿಸುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೂ ಮಾತನಾಡಿದ್ದಾಗಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಜಾನುವಾರು ಸಾಗಾಟ ವಿಷಯ ಸಂಬಂಧಿಸಿ ಗೊಂದಲ ಉಂಟುಮಾಡುತ್ತಿರುವ ಜನರ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಯಾವುದೇ ಅಕ್ರಮ ಜಾನುವಾರು ಸಾಗಾಟ ಕಂಡುಬಂದರೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ. ಜನರು ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಡಳಿತ ಟ್ವೀಟ್ ಮಾಡಿದೆ.