ಮಂಗಳೂರು: ವಿನಾಯಕ ಬಾಳಿಗ ಸಹೋದರಿಗೆ ದುಬೈಯಿಂದ ಕೊಲೆ ಬೆದರಿಕೆ
ಜು.27ರ ರಾತ್ರಿ ದುಬೈಯಿಂದ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಕೊಲೆಗೈಯುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಪ್ರಕರಣದ ತನಿಖೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಬಾಳಿಗಾರ ಸಹೋದರಿ ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು.
ಕರಾವಳಿ ಕರ್ನಾಟಕ ವರದಿ
ಮಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ತನಿಖೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಬಾಳಿಗಾರ ಸಹೋದರಿ ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಅವರಿಗೆ ವಿದೇಶದಿಂದ ಕೊಲೆ ಬೆದರಿಕೆ ಕರೆಗಳನ್ನು ಮಾಡಲಾದ ಸಂಗತಿ ಬೆಳಕಿಗೆ ಬಂದಿದೆ.
ವಿನಾಯಕ ಬಾಳಿಗಾರ ಸಹೋದರಿ ಅನುರಾಧ ಅವರಿಗೆ ಜು.27ರ ರಾತ್ರಿ ದುಬೈಯಿಂದ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ಪ್ರಕರಣದ ಆರೋಪಿಗಳ ವಿರುದ್ಧ ದೂರು ನೀಡಲು ಮುಂದಾದರೆ ಕೊಲೆಗೈಯುವುದಾಗಿ ಬೆದರಿಕೆ ಒಡ್ಡಿದ್ದಾರೆ. ಈ ಫೋನ್ ಕರೆಗಳ ವಿವರವನ್ನು ಪೊಲೀಸ್ ಆಯುಕ್ತರಿಗೆ ಅನುರಾಧ ಅವರು ನೀಡಿದ್ದಾರೆ.
ಅನುರಾಧ ಅವರು ಸಹೋದರ ವಿನಾಯಕ ಬಾಳಿಗಾ ಕೊಲೆ ತನಿಖೆ ನಡೆಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜು.28ರ ಸಂಜೆ 5ಗಂಟೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿತ್ತು.
ಅನುರಾಧ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿ ಮನೆಗೆ ತೆರಳುವ ಸಂದರ್ಭ ಮಲೇಶಿಯಾದಿಂದ ಬೆದರಿಕೆ ಕರೆಗಳು ಪುನರಾವರ್ತನೆಯಾಗಿವೆ ಎಂದು ಡಾ. ನರೇಂದ್ರ ನಾಯಕ್ ತಿಳಿಸಿದ್ದಾರೆ.
ದ.ಕ ನಿರ್ಗಮಿತ ಜಿಲ್ಲಾಧಿಕಾರಿಗಳಿಗೆ ಕೊಲೆ ಬೆದರಿಕೆ ಒಡ್ಡಿದ ಆರೋಪಿಯನ್ನು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಆದರೆ ಬಾಳಿಗಾರ ಸಹೋದರಿಗೆ ಕೊಲೆ ಬೆದರಿಕೆ ಒಡ್ಡಿದ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರುವುದು ಕಳವಳಕಾರಿ ಎಂದು ನರೇಂದ್ರ ನಾಯಕ್ ಆತಂಕವ್ಯಕ್ತ ಪಡಿಸಿದ್ದಾರೆ. ಈ ಪ್ರಕರಣ ಭೇದಿಸುವುದು ಮಂಗಳೂರು ಪೊಲೀಸರಿಗೆ ಕಷ್ಟವೇನಲ್ಲ ಎಂದು ನಾಯಕ್ ತಿಳಿಸಿದ್ದಾರೆ.