ಕಾಸರಗೋಡು: ಮದುವೆ ಮಾಡಿಸಲಿಲ್ಲ ಎಂದು ನಾಲ್ವರನ್ನು ಕೊಲೆಗೈದ ಆರೋಪಿ ಬಂಧನ
ಆಗಾಗ ಮನೆಯವರನ್ನು ಕೊಲೆಗೈಯುವುದಾಗಿ ಬೆದರಿಸುತ್ತಿದ್ದ.
ಆರೋಪಿ ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ಮಾನಸಿಕ ಅಸ್ವಸ್ಥನಾಗಿದ್ದು, ಮನೋವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.
ಕರಾವಳಿ ಕರ್ನಾಟಕ ವರದಿ
ಕುಂಬಳೆ: ಮದುವೆ ಮಾಡಿಸಲಿಲ್ಲ ಎಂಬ ಸೇಡಿನಿಂದ ಮೂವರು ಸೋದರ ಮಾವಂದಿರು ಮತ್ತು ಚಿಕ್ಕಮ್ಮನನ್ನು ವ್ಯಕ್ತಿಯೋರ್ವ ಕೊಡಲಿಯಿಂದ ಕೊಲೆಗೈದ ಘಟನೆ ಸೋಮವಾರ ಸಂಜೆ ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಬಾಯಾರು ಕನಿಯಾಲದ ಗುರಿಕುಮೇರಿನಲ್ಲಿ ನಡೆದಿದೆ.
ಸಹೋದರರಾದ ಬಾಬು(65), ವಿಠಲ(60), ಸದಾಶಿವ(55) ಮತ್ತು ಇವರ ಸಹೋದರಿ ದೇವಕಿ(58) ಕೊಲೆಯಾದವರು. ಉದಯ(45) ಕೊಲೆ ಆರೋಪಿಯಾಗಿದ್ದು ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಉದಯನ ತಾಯಿ ಲಕ್ಷ್ಮಿ ಕೊಲೆಗಡುಕನ ಕೈಯಿಂದ ತಪ್ಪಿಸಿಕೊಂಡು ಪಕ್ಕದ ಮನೆಯ ಕೃಷ್ಣಪ್ಪ ಎಂಬವರ ಮನೆಯಲ್ಲಿ ಅವಿತುಕೊಂಡಿದ್ದರು.
ಆರೋಪಿ ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ಮಾನಸಿಕ ಅಸ್ವಸ್ಥನಾಗಿದ್ದು, ಮನೋವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಈತ ಆಗಾಗ ಮನೆಯವರನ್ನು ಕೊಲೆಗೈಯುವುದಾಗಿ ಬೆದರಿಸುತ್ತಿದ್ದ. ಆದ್ದರಿಂದ ಈತ ಎಂದಿನಂತೆ ಬೆದರಿಸುತ್ತಿದ್ದಾನೆ ಎಂದು ಮನೆಯವರು ಈತನ ಮಾತನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆರೋಪಿಯ ಮಾವ ಕೊಡಲಿ ಹರಿತ ಮಾಡುವ, ಹಿಡಿ ಹಾಕುವ ಕೆಲಸವನ್ನೂ ಕೂಲಿ ಮತ್ತು ರೈತಾಪಿ ಕೆಲಸದ ಬಿಡುವಿನಲ್ಲಿ ಮಾಡುತ್ತಿದ್ದರು. ಹೀಗೆ ಬಂದಿದ್ದ ಕೆಲವು ಕೊಡಲಿಗಳು ಮನೆಯಲ್ಲಿ ಇದ್ದವು. ಆರೋಪಿ ಉದಯ ಇದೇ ಕೊಡಲಿಗಳಿಂದ ಕೊಲೆಗೈದಿದ್ದಾನೆ. ಮನೆಯಲ್ಲಿ ರಕ್ತದ ಹೊಳೆಯೇ ಹರಿದಿದ್ದ ದೃಶ್ಯ ಭಯಾನಕವಾಗಿತ್ತು.
ಕೊಲೆಗೈದ ಬಳಿಕ ಆರೋಪಿ ಉದಯ ಮನೆಯಿಂದ ಸುಮಾರು ದೂರ ಓಡಿದ್ದ. ಈತನನ್ನು ಕಟ್ಟತ್ತಾರಿನಿಂದ ಹಿಡಿದು ರಿಕ್ಷಾದಲ್ಲಿ ಮನೆಗೆ ಕರೆತರಲಾಗಿತ್ತು. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸ್ಥಳೀಯರು ಕಾಲು ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.