ಬರವಣಿಗೆಯಲ್ಲಿ ಪ್ರಾದೇಶಿಕತೆ ಮೈಗೂಡಿಸಿಕೊಳ್ಳುವುದು ಒಂದು ಕಲೆ: ಸಾಹಿತಿ ಯೋಗೇಶ್ ಮಾಸ್ಟರ್

ಯುವ ಲೇಖಕ ಎಂ.ದಾನಿಶ್ ರವರ 'ಕಾಡಿಗೊಂದು ಕಿಟಕಿ' ಪುಸ್ತಕ ಬಿಡುಗಡೆ

‘ಮನುಷ್ಯನ ವೈಯಕ್ತಿಕ ಬದುಕು ಸಾಮಾಜಿಕ ಬದುಕಿನೊಂದಿಗೆ ಹಾಸು ಹೊಕ್ಕಿದೆ ಎಂಬುವುದನ್ನು ದಾನಿಶ್ ರವರ ‘ಕಾಡಿಗೊಂದು ಕಿಟಕಿ’ಯು ಕಟ್ಟಿಕೊಡುತ್ತದೆ.’

ಕರಾವಳಿ ಕರ್ನಾಟಕ ವರದಿ/ಇರ್ಷಾದ್ ವೇಣೂರು
ಮಂಗಳೂರು: ಕಥೆಗಾರ ಕೇವಲ ಕಥೆಗಾರನಾದರೆ ಸಾಲದು. ಕಥೆಗೆ ತಕ್ಕುದಾದ ಪ್ರಾದೇಶಿಕ ಭಾಷೆ, ಸಂಸ್ಕೃತಿಯನ್ನು ಅರಿತುಕೊಂಡು ಅದನ್ನುತನ್ನ ಬರವಣಿಗೆಯಲ್ಲಿ ಮೈಗೂಡಿಸಿಕೊಳ್ಳುವುದು ಒಂದು ರೀತಿಯ ಕಲೆ ಎಂದು ಖ್ಯಾತ ಲೇಖಕ, ಸಾಹಿತಿ ಯೋಗೇಶ್ ಮಾಸ್ಟರ್ ತಿಳಿಸಿದರು. ಸಂವೇದನ ಪ್ರಕಾಶನ ಸಂಸ್ಥೆಯು ಪ್ರಕಟಿಸಿರುವ, ಯುವ ಲೇಖಕ ಎಂ.ದಾನಿಶ್ ರವರ ‘ಕಾಡಿಗೊಂದು ಕಿಟಕಿ’ ಕಾದಂಬರಿಯನ್ನು ಝೂಮ್ಆ್ಯಪ್ ಮೂಲಕ ಆನ್ ಲೈನ್ ನಲ್ಲಿ ಬಿಡುಗಡೆ ಮಾಡುತ್ತಾ ಅವರು ಮಾತನಾಡಿದರು.

ಕಥೆಯಲ್ಲಿ ಪಾತ್ರಗಳ ನಡುವಿನ ಮಾತುಗಾರಿಕೆ ಮತ್ತು ಆಹಾರಗಳ ವಿವರಣೆಯು ಲೇಖಕನ ಸೂಕ್ಷ್ಮ ಪ್ರಜ್ಞೆಯನ್ನು ಮತ್ತು ಗಮನಿಸುವಿಕೆಯನ್ನು ತೋರಿಸಿಕೊಡುತ್ತದೆ.ಮನುಷ್ಯನ ವೈಯಕ್ತಿಕ ಬದುಕು ಸಾಮಾಜಿಕ ಬದುಕಿನೊಂದಿಗೆ ಹಾಸು ಹೊಕ್ಕಿದೆ ಎಂಬುವುದನ್ನು ದಾನಿಶ್ ರವರ ‘ಕಾಡಿಗೊಂದು ಕಿಟಕಿ’ಯು ಕಟ್ಟಿಕೊಡುತ್ತದೆ. ಅದೇರೀತಿ ಪಾತ್ರಗಳ ನಡುವಿನ ಮಾತುಗಾರಿಕೆಯು ಸ್ಥಳೀಯತೆಯನ್ನು ಪ್ರತಿಬಿಂಬಿಸುವುದಲ್ಲದೇ, ಪ್ರಸ್ತುತ ಬದುಕು ತನ್ನ ಮುಂದಿನ ಪೀಳಿಗೆಗೆ ತೊಡಕಾಗುವುದಾದರೆ ಅದು ಅತ್ಯಂತ ದೊಡ್ಡ ಸ್ವಾರ್ಥಪರತೆ ಎಂಬುವುದು ಕಾದಂಬರಿಯಲ್ಲಿ ಸಾಂಕೇತಿಕವಾಗಿದ್ದು, ಓದುಗರನ್ನುಓದುವಂತೆ ಮಾಡುತ್ತದೆ ಎಂದು ಯೋಗೇಶ್ ಮಾಸ್ಟರ್ ತಿಳಿಸಿದರು.

ಪತ್ರಕರ್ತ, ಲೇಖಕ ಏ.ಕೆ.ಕುಕ್ಕಿಲ, ಓರ್ವ ಬರಹಗಾರನಿಗೆ ಬೇಕಿರುವುದು ಸಂಪೂರ್ಣ ಪ್ರೋತ್ಸಾಹ.ಏಕೆಂದರೆ ಈಗ ಸಮಸ್ಯೆಇರುವುದು ಬರೆಯುವುದರಲ್ಲಲ್ಲ. ಪ್ರಕಟಿಸುವುದೇ ಒಂದು ಸಮಸ್ಯೆಯಾಗಿದೆ.ಈ ಮಧ್ಯೆ ದಾನಿಶ್ ರವರ ‘ಕಾಡಿಗೊಂದು ಕಿಟಕಿ’ ಬಿಡುಗಡೆ ಮಾಡುತ್ತಿರುವುದು ಉತ್ತಮ ಕೆಲಸ. ಕಾಡಿನ ಜನರ ಬಗ್ಗೆ ಬಹಳ ನೈಜವಾಗಿ ಕಟ್ಟಿಕೊಟ್ಟು, ಒಂದು ರೀತಿಯ ಹೊಸ ಪ್ರಯತ್ನಕ್ಕೆ ಕೈ ಹಾಕಿರುವುದಕ್ಕೆಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಸಂವೇದನ ಪ್ರಕಾಶನ ಸಂಸ್ಥೆಯ ಅಧ್ಯಕ್ಷ ನಿಹಾಲ್ ಕಿದಿಯೂರು ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿದರು.

ಪುಸ್ತಕದ ಲೇಖಕ ಎಂ.ದಾನಿಶ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಶೀರುದ್ದೀನ್ ಮಂಜನಾಡಿ ಧನ್ಯವಾದಗೈದರು. ಇರ್ಷಾದ್ ವೇಣೂರು ನಿರೂಪಿಸಿದರು. ಶಾಕೀಬ್ ಉಳ್ಳಾಲ್ ವೀಡಿಯೋ ಸಂವಹನಕ್ಕಾಗಿ ಸಹಕರಿಸಿದರು.

ಪುಸ್ತಕಕ್ಕಾಗಿ 8050101458 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

 

Get real time updates directly on you device, subscribe now.