ಭೂಮಿಯಲ್ಲಿ ನೀರನ್ನು ಸಂಗ್ರಹಿಸಿಡಬಲ್ಲ ಏಕೈಕ ಕಾರ್ಖಾನೆ ಅರಣ: ಉಡುಪಿ ವಲಯ ಅರಣ್ಯಾಧಿಕಾರಿ ಶ್ರೀ ಕ್ಲಿಫರ್ಡ್ ಲೋಬೋ

ಬದುಕುವುದಕ್ಕೆ ಮುಖ್ಯವಾಗಿ ಬೇಕಾಗಿದ್ದ ಮರಗಳನ್ನು ನಾವು ನಾಶ ಮಾಡುತ್ತಿದ್ದೇವೆ ಎಂದು ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ಹೇಳಿದರು.

ಉದ್ಯಾವರ: ಭೂಮಿಯಲ್ಲಿ ನೀರನ್ನು ಸಂಗ್ರಹಿಸಿಡಬಲ್ಲ ಒಂದು ಸಮರ್ಥವಾದ ಸಂಗ್ರಹಕವಿದ್ದರೆ ಅದು ಅರಣ್ಯಗಳು. ಮಳೆಗಾಲದಲ್ಲಿ ನೀರನ್ನು ಹೀರಿಕೊಳ್ಳುವ ಮರಗಳು ಮುಂದಿನ ದಿನಗಳಲ್ಲಿ ಅದನ್ನು ತೊರೆಗಳ ರೂಪದಲ್ಲಿ, ಜರಿಗಳ ರೂಪದಲ್ಲಿ ಹರಿಯಬಿಟ್ಟು ಭೂಮಿಯನ್ನು ಸುಸ್ಥಿತಿಯಲ್ಲಿ ಕಾಯ್ದುಕೊಳ್ಳುತ್ತದೆ. ಆದರೆ ಆಧುನಿಕತೆಯ ಹೆಸರಲ್ಲಿ ನಾವು ಅರಣ್ಯವನ್ನು ನಾಶ ಮಾಡುತ್ತಿದ್ದೇವೆ. ನಮಗೆ ರಸ್ತೆಗಳು ಬೇಕು, ದೊಡ್ಡ ದೊಡ್ಡ ಮನೆಗಳು ಬೇಕು, ಫ್ಯಾಕ್ಟರಿಗಳು ಬೇಕು, ದೊಡ್ಡ ದೊಡ್ಡ ಕಟ್ಟಡಗಳು ಬೇಕು, ಅಣೆಕಟ್ಟುಗಳು ಬೇಕು ಈ ಬೇಕುಗಳನ್ನು ದಕ್ಕಿಸಿಕೊಳ್ಳಲು ನಮ್ಮ ಬದುಕುವುದಕ್ಕೆ ಮುಖ್ಯವಾಗಿ ಬೇಕಾಗಿದ್ದ ಮರಗಳನ್ನು ನಾವು ನಾಶ ಮಾಡುತ್ತಿದ್ದೇವೆ ಎಂದು ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ಹೇಳಿದರು.

ಅವರು ಸೇವಾ ಮತ್ತು ಸಾಂಸ್ಕಂತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸೈಂಟ್ ಪ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿದ ಉಚಿತ ಸಾಗುವಾನಿ ಗಿಡ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಗಿಡವನ್ನು ವಿತರಿಸಿ ಮಾತನಾಡಿದರು.

ನಮ್ಮ ಅಭಿವೃದ್ಧಿಯ ಪರಿಕಲ್ಪನೆ ಬದಲಾಗಬೇಕಾಗಿದೆ. ಮರಗಳನ್ನು ಉಳಿಸಿಕೊಂಡು ನಮಗೆ ಬೇಕಾದನ್ನು ದಕ್ಕಿಸುವ ಯೋಜನೆಯನ್ನು ನಾವು ಹಾಕಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಭೂಮಿಯ ಅಸಮತೋಲನಕ್ಕೆ ಕಾರಣವಾಗಿ ನಾವು ಮುಂದಿನ ದಿನಗಳಲ್ಲಿ ದುರಂತವನ್ನು ಕಾಣಬೇಕಾಗುತ್ತದೆ ಎಂದು ಉಡುಪಿ ವಲಯ ಅರಣ್ಯಾಧಿಕಾರಿ ಶ್ರೀ ಕ್ಲಿಫರ್ಡ್ ಲೋಬೋರವರು ಅವರು ಮುಂದುವರಿಯುತ್ತಾ ಈ ಭೂಮಿ ಉಳಿಯಬೇಕಾದರೆ, ಭೂಮಿ ಸಮತೋಲನವಾಗಿ ಕಾರ್ಯ ಮಾಡಬೇಕಾದರೆ ನಾವು ನಮ್ಮ ಭೂಮಿಯಲ್ಲಿರುವ ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕು ಎಂದು ಕ್ಲಿಫರ್ಡ್ ಲೋಬೋ ಈ ಸಂದರ್ಭದಲ್ಲಿ ಹೇಳಿದರು.

ಅರಣ್ಯಗಳು ನಾಶವಾದಂತೆಲ್ಲಾ ಈ ಭೂಮಿಯ ಜೀವ ವೈವಿಧ್ಯತೆಗಳು ಕೂಡಾ ನಾಶವಾಗುತ್ತವೆ. ಹಾಗಾಗಿ ಭೂಮಿಯ ಉಳಿವಿಗೆ, ಮಾನವ ಜನಾಂಗದ ಉಳಿವಿಗೆ ಅರಣ್ಯಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಮುಂದಿನ ಜನಾಂಗಕ್ಕೆ ಒಳ್ಳೆಯ ಗಾಳಿ, ಒಳ್ಳೆಯ ಬೆಳಕು, ಒಳ್ಳೆಯ ನೀರು ದೊರೆಯಬೇಕಾದರೆ ನಾವು ಅರಣ್ಯಗಳನ್ನು ಉಳಿಸಬೇಕಾಗಿದೆ ಎಂದರು.

ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪುಷ್ಪಾ ತಾವ್ರೋ ಇವರು ಮಾತಾನಾಡಿ ಪರಿಸರದ ಉಳಿವಿಗೆ ನಿರಂತವಾಗಿ ಯು.ಎಫ್.ಸಿ ಹಾಕಿಕೊಂಡ ಈ ಕಾರ್ಯಕ್ರಮ ಅತ್ಯಂತ ಶ್ಲಾಘನೀಯವಾದುದು. ಅದರಲ್ಲೂ ಮಕ್ಕಳನ್ನು ಕೇಂದ್ರೀಕರಿಸಿ ನಮ್ಮ ಶಾಲೆಯನ್ನು ಬಳಸಿಕೊಂಡದಕ್ಕೆ ನನ್ನ ಕೃತಜ್ಞತೆಗಳು. ನಮ್ಮ ಪರಿಸರದ ಉಳಿವಿಗೆ ನಾವೆಲ್ಲಾ ಶ್ರಮಿಸೋಣ ನಮ್ಮಲ್ಲಿ ಪರಿಸರ ಪ್ರಜ್ಞೆ ಜಾಗ್ರತಗೊಳ್ಳಲಿ ಎಂದರು. ಗಿಡವನ್ನು ಪಡೆದುಕೊಂಡ ಮಕ್ಕಳು, ತಾಯಿ ತನ್ನ ಮಗುವನ್ನು ಬೆಳೆಸುವಂತೆ ಪ್ರೀತಿಯಿಂದ ಬೆಳೆಸಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್‍ರವರು ಮಾತನಾಡುತ್ತಾ ಗ್ಲೋಬಲ್ ವಾರ್ಮಿಂಗ್ ಸಮಸ್ಯೆಯನ್ನು ಎದುರಿಸುವ ಈ ದಿನಗಳಲ್ಲಿ ಅರಣ್ಯ ನಾಶದ ಬಗ್ಗೆ ನಾವೆಲ್ಲಾ ಗಂಭೀರವಾಗಿ ಆಲೋಚಿಸಬೇಕಾಗಿದೆ. ಮನುಷ್ಯನ ಜೀವವನ್ನು ಸುಸ್ಥಿತಿಯಲ್ಲಿಡಬಲ್ಲ ಆಮ್ಲಜನಕ ಪೂರೈಸುವ ಮರಗಳು ಒಂದೆಡೆ ಕಡಮೆಯಾಗುತ್ತಿದೆ. ಇನ್ನೊಂದೆಡೆ ವಾತಾವರಣವನ್ನು ಮಾಲಿನ್ಯಗೊಳಿಸುವ ಪ್ರಕ್ರಿಯೆ ಜರಗುತ್ತದೆ. ಇದು ನೇರ ಮನುಷ್ಯನ ಜೀವದ ಮೇಲೆ ಪರಿಣಾಮವನ್ನು ಬೀರುತ್ತಿದೆ ಇದನ್ನು ಮನಗಂಡು ನಾವು ಗಿಡಗಳನ್ನು ಬೆಳೆಸಬೇಕಾಗಿದೆ. ಗಿಡಗಳಿಗೂ ಕೂಡಾ ನಮ್ಮ ಮಾತು ಕೇಳುವಂತಹ ಗುಣವಿದೆ. ನಾವು ಗಿಡಗಳೊಂದಿಗೆ ಮಾತಾಡುತ್ತಿದ್ದರೆ ಗಿಡಗಳು ಚೆನ್ನಾಗಿ ಬೆಳೆಯುತ್ತವೆ, ಮಕ್ಕಳು ಗಿಡಗಳೊಂದಿಗೆ ಮಾತನಾಡುವ ಅಭ್ಯಾಸ ಬೆಳೆಸಿಕೊಳ್ಳಿ ಎಂದರು.

ವೇದಿಕೆಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷರಾದ ಶ್ರೀ ರಿಯಾಝ್ ಪಳ್ಳಿಯವರು ಉಪಸ್ಥಿತರಿದ್ದರು ಮತ್ತು ಅರಣ್ಯ ರಕ್ಷಕರಾದ ಶ್ರೀ ದೇವರಾಜ್ ಪಾಣಾ ಸಮಾರಂಭದಲ್ಲಿ ಉಪಸ್ಥಿತರಿದದ್ದರು ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅನೂಪ್ ಕುಮಾರ್ ಇವರು ಸ್ವಾಗತಿಸಿದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು. ಹಿರಿಯ ಸದಸ್ಯ ಶ್ರೀ ಆಬಿದ್ ಆಲಿಯವರು ಕಾರ್ಯಕ್ರಮ ನಿರೂಪಿಸಿದರು.

ಈ ಸಮಾರಂಭದಲ್ಲಿ ಶಾಲೆಯ 400 ಮಕ್ಕಳಿಗೆ ಸಾಗುವಾನಿ ಮರಗಳನ್ನು ವಿತರಿಸಲಾಯಿತು. ಒಂದು ವರ್ಷದ ಕಾಲಾವಧಿಯ ನಂತರ ಗಿಡವನ್ನು ಬೆಳೆಸಿದ ಮಕ್ಕಳ ಮನೆಗಳಿಗೆ ಸಂಸ್ಥೆಯ ಕಾರ್ಯಕರ್ತರು ಭೇಟಿಕೊಟ್ಟು ಅತ್ಯುತ್ತಮವಾಗಿ ಬೆಳೆಸಿದ 3 ಮಕ್ಕಳಿಗೆ ನಗದು ಬಹುಮಾನವನ್ನು ವಿತರಿಸಲಾಗುವುದು.

Get real time updates directly on you device, subscribe now.