ಕೇಂದ್ರ ಸರಕಾರ ನಮಗೆ ನಯಾಪೈಸೆ ಗೌರವಧನ ಹೆಚ್ಚಿಸಿಲ್ಲ: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ಸುಶೀಲಾ ನಾಡ

ಕೇಂದ್ರದ ಮಾತೃ ವಂದನಾದಲ್ಲಿ ಉಚಿತ ಕೆಲಸ ಮಾಡಲಾರೆವು

ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಮುಷ್ಕರ ನಡೆಸಿದರು.

ಉಡುಪಿ: ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಮುಷ್ಕರ ನಡೆಸಿದರು.

ಕೇಂದ್ರ ಸರಕಾರವು ಮಾತೃ ವಂದನಾ ಕಾರ್ಯಕ್ರಮವನ್ನು ಅಂಗನವಾಡಿ ನೌಕರರ ಮೂಲಕ ಜಾರಿ ಮಾಡುತ್ತಿದ್ದು, 2010ರಿಂದ ನೌಕರರಿಗೆ ನಯಾಪೈಸೆ ಗೌರವಧನ ಹೆಚ್ಚಿಸಿರದಿದ್ದರೂ ಉಚಿತವಾಗಿ ಕಾರ್ಯಕ್ರಮ ಮಾಡುವಂತೆ ಒತ್ತಾಯಿಸುತ್ತಿದೆ. ಈ ಕಾರ್ಯಕ್ರಮದ ಒಂದು ಕಂತಿಗೆ 300ರೂ. ನಿಗದಿ ಮಾಡುವವರೆಗೆ ಉಚಿತವಾಗಿ ಕೆಲಸ ಮಾಡುವುದಿಲ್ಲ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಸುಶೀಲ ನಾಡ ಅವರು ಪ್ರತಿಭಟನಯನ್ನು ಉದ್ದೇಶಿಸಿ ನುಡಿದರು.

ಕೇಂದ್ರ ಸರಕಾರ ಮೂರು ವರ್ಷದೊಳಗಿನ ಮಕ್ಕಳಿಗೆ ಟೇಕ್ ಹೋಮ್ ರೇಷನ್ ಬದಲು ಫಲಾನುಭವಿಗಳಿಗೆ ನೇರ ಸೌಲಭ್ಯ ವರ್ಗಾವಣೆ ಮತ್ತು ಷರತ್ತುಬದ್ಧ ನಗದು ವರ್ಗಾವಣೆ ಹಾಗೂ ಮೂರರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಪೋಷಕಾಂಶಯುಕ್ತ ಪ್ಯಾಕೇಜ್ ಆಹಾರ ಕಳಿಸಿ ಕೊಡುವ ಯೋಜನೆ ಮೂಲಕ ಅಂಗನವಾಡಿ ನೌಕರರ ಜೀವನವನ್ನೇ ನಾಶ ಮಾಡಲು ಹೊರಟಿದೆ ಎಂದು ಸುಶೀಲ ನಾಡ ಅವರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಈ ಕ್ರಮವನ್ನು ರಾಜ್ಯದಲ್ಲಿ ಜಾರಿಗೆ ತರಕೂಡದು ಎಂದು ಅವರು ಆಗ್ರಹಿಸಿದರು.

ಸರಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ, ಯುಕೆಜಿ ಆರಂಭಿಸಿರುವುದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಲ್ಲದೇ ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಸರಕಾರಿ ಶಾಲೆಗಳ ಬದಲು ಅಂಗನವಾಡಿಗಳಲ್ಲೇ ಎಲ್.ಕೆಜಿ, ಯುಕೆಜಿ ತರಗತಿ ಆರಂಬಿಸಬೇಕು. ಸೇವಾ ಜೇಷ್ಠತೆ ಆಧಾರದಲ್ಲಿ ಕನಿಷ್ಠ ವೇತನ ಜಾರಿಗೊಳಿಸಬೇಕು, ನೌಕರರಿಗೆ ಪ್ರತೀ ತಿಂಗಳೂ ಗೌರವಧನ ಪಾವತಿಸಬೇಕು ಮುಂತಾದ ಬೇಡಿಕೆಗಳ ಬಗ್ಗೆ ಅವರು ಈ ಸಂದರ್ಭ ಒತ್ತಾಯಿಸಿದರು.

ಮುಷ್ಕರದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಭಾರತಿ, ಉಷಾ, ಕೋಶಾಧಿಕಾರಿ ಆಶಾಲತಾ ಶೆಟ್ಟಿ, ಕುಂದಾಪುರ ತಾ. ಅಧ್ಯಕ್ಷೆ ವನಜಾ, ಉಡುಪಿ ತಾ. ಕಾರ್ಯದರ್ಶಿ ಅರುಣಾ, ಕೋಶಾಧಿಕಾರಿ ಸವಿತಾ, ಬ್ರಹ್ಮಾವರ ಅಧ್ಯಕ್ಷೆ ಜಯಲಕ್ಷ್ಮಿ, ಕಾರ್ಯದರ್ಶಿ ಶೈಲಾ, ಕೋಶಾಧಿಕಾರಿ ಸರೋಜಿನಿ, ಸಿಐಟಿಯು ಮುಂದಾಳುಗಳಾದ ಬಾಲಕೃಷ್ಣ ಶೆಟ್ಟಿ, ಎಚ್. ನರಸಿಂಹ, ಕವಿರಾಜ್ ಮತ್ತಿತರರು ಇದ್ದರು. ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಕಳಿಸಲಾಯಿತು.

ಕುಂದಾಪುರ ತಾಲೂಕಿನ 400, ಬ್ರಹ್ಮಾವರದ 270, ಉಡುಪಿಯ 270 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಸಹಾಯಕಿಯರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ನೆರೆ ಬಂದರೂ ಅಂಗನವಾಡಿ ನೌಕರರಿಗೆ ರಜೆ ಇಲ್ಲ
ಭಾರೀ ಮಳೆ ಹಾಗೂ ನೆರೆ ಸಂದರ್ಭದಲ್ಲಿ ಜಿಲ್ಲಾಡಳಿತವು ಶಾಲೆ-ಕಾಲೇಜುಗಳಿಗೆ ರಜೆ ನೀಡಿದ ಸಂದರ್ಭಗಳಲ್ಲಿ ನಮಗೆ ಮಾತ್ರ ರಜೆ ಇಲ್ಲ. ಅಂಗನವಾಡಿ ಕೇಂದ್ರಗಳಿಗೆ ನೆರೆ-ಮಳೆಯಿಂದ ಮಕ್ಕಳು ಬರದಿದ್ದರೂ ನಮಗೆ ರಜೆ ಇಲ್ಲ. ನಾವು ಕೂಡ ಶಿಕ್ಷಕಿಯರಲ್ಲವೆ? ಇನ್ನು ಮುಂದಾದರೂ ಮಳೆ ಬಂದಾಗ, ನೆರೆ ಬಂದಾಗ ಅಂಗನವಾಡಿ ಕೇಂದ್ರಗಳಿಗೂ ರಜೆ ನೀಡುವ ಪರಿಪಾಠ ಶುರುವಾಗಲಿ ಎಂದು ಸಾಲಿಗ್ರಾಮದ ಅಂಗನವಾಡಿ ಕಾರ್ಯಕರ್ತೆ ವನಿತಾ ಮನವಿ ಮಾಡಿದರು.

Get real time updates directly on you device, subscribe now.