ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ: ಕುಂದಾಪುರ ಪೊಲೀಸರಿಂದ ಶ್ಲಾಘನೀಯ ಕಾರ್ಯ

ಕೊರೋನಾ ಸೋಂಕು ಹರಡುವುದನ್ನು ತಪ್ಪಿಸಲು ತಮ್ಮ ಹಾಗೆಯೆ ಬಹಳ ಜವಾಬ್ದಾರಿಯಿಂದ, ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತರ ದೈನಂದಿನ ಜೀವನದ ಕಷ್ಟಕ್ಕೆ ಕುಂದಾಪುರ ಮತ್ತು ಬೈಂದೂರು ತಾಲೂಕುಗಳ ಪೊಲೀಸರು ಸ್ಪಂದಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆ ಲಾಕ್ ಡೌನ್ ಅನ್ನು ಸಂಪೂರ್ಣವಾಗಿ ಜಾರಿಗೊಳಿಸುವ ಮಹತ್ತರ ಹೊಣೆ ಹೊತ್ತಿರುವ ಪೊಲೀಸರು ಈ ಒತ್ತಡಗಳ ನಡುವೆಯೂ ಮಾನವೀಯ ಕೈಂಕರ್ಯವೊಂದನ್ನು ಮಾಡುತ್ತಿದ್ದಾರೆ. ಕೊರೋನಾ ಸೋಂಕು ಹರಡುವುದನ್ನು ತಪ್ಪಿಸಲು ತಮ್ಮ ಹಾಗೆಯೆ ಬಹಳ ಜವಾಬ್ದಾರಿಯಿಂದ, ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತರ ದೈನಂದಿನ ಜೀವನದ ಕಷ್ಟಕ್ಕೆ ಕುಂದಾಪುರ ಮತ್ತು ಬೈಂದೂರು ತಾಲೂಕುಗಳ ಪೊಲೀಸರು ಸ್ಪಂದಿಸಿದ್ದಾರೆ.

ಆಶಾ ಕಾರ್ಯಕರ್ತರಿಗೆ ನೆರವಾಗುವ ಸಲುವಾಗಿ ತಮ್ಮ ಸಿಬ್ಬಂದಿಗಳು ಮತ್ತು ದಾನಿಗಳಿಂದ ಸಂಗ್ರಹಿಸಿದ ಅಗತ್ಯ ವಸ್ತುಗಳ ಕಿಟ್‌ಗಳನ್ನು ಇಂದು ಕುಂದಾಪುರ ಟೌನ್ ಪೊಲೀಸ್ ಠಾಣೆಯ ಬಳಿ ಇರುವ ರಕ್ತೇಶ್ವರಿ ದೇವಾಲಯದ ಸಭಾಂಗಣದಲ್ಲಿ ಸಾಂಕೇತಿಕವಾಗಿ ಹಂಚಿಕೆ ಮಾಡಲಾಯಿತು. ಸಭೆ ಸಮಾರಂಭಗಳಿಗೆ ಜಿಲ್ಲೆಯಲ್ಲಿ ನಿರ್ಬಂಧವಿರುವ ಕಾರಣ ಕೆಲವೇ ಆಶಾ ಕಾರ್ಯಕರ್ತರಿಗೆ ಸಾಂಕೇತಿಕವಾಗಿ ಈ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಬೈಂದೂರು ವೃತ್ತ ನಿರೀಕ್ಷಕರಾದ ಸುರೇಶ್ ನಾಯ್ಕ್, ಕುಂದಾಪುರ ಟೌನ್ ಪೊಲೀಸ್ ಥಾಣೆಯ ಪಿಎಸ್ಐ ಹರೀಶ್, ಡಾ. ಪೂರ್ಣಿಮಾ ಮತ್ತು ಡಾ. ರಮೇಶ್ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

ಒಟ್ಟು 400 ರಷ್ಟು ಕಿಟ್‌ಗಳನ್ನು ಪೊಲೀಸರು ಸಿದ್ಧಗೊಳಿಸಿದ್ದು ಈ ಕಿಟ್‌ಗಳನ್ನು ನಾಳೆ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಆಶಾ ಕಾರ್ಯಕರ್ತರಿಗೆ ಸ್ವತಃ ಪೊಲೀಸ್ ಸಿಬ್ಬಂದಿಗಳೇ ವಾಹನಗಳಲ್ಲಿ ತೆರಳಿ ಅವರ ಊರಿನಲ್ಲೇ ಹಂಚಿಕ ಮಾಡಲಿದ್ದಾರೆ ಎಂದು ಕುಂದಾಪುರ ಪಿಎಸ್ಐ ಹರೀಶ್ ತಿಳಿಸಿದ್ದಾರೆ.

ತಮ್ಮ ಕರ್ತವ್ಯದ ಒತ್ತಡಗಳ ನಡುವೆಯೇ ಪೊಲೀಸರು ಕೈಗೆತ್ತಿಕೊಂಡಿರುವ ಈ ಮಾನವೀಯ ಕೈಂಕರ್ಯ ಶ್ಲಾಘನೆಗೆ ಪಾತ್ರವಾಗಿದೆ.

Get real time updates directly on you device, subscribe now.