ಕ್ವಾರಂಟೈನ್ ಕೇಂದ್ರದಿಂದ ಹೊರಬಂದರೆ ಕ್ರಿಮಿನಲ್ ಕೇಸ್: ಉಡುಪಿ ಡಿಸಿ ಎಚ್ಚರಿಕೆ  

ನಿಮ್ಮಿಂದ ಯಾರಿಗೂ ಕೊರೋನಾ ಹರಡದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಆದೇಶ ಪಾಲಿಸಿ

ಕ್ವಾರಂಟೈನ್ ನಲ್ಲಿರುವವರು ಹೊರಗೆ ಬಂದು ಓಡಾಡಿದರೆ ಮುಲಾಜಿಲ್ಲದೇ ಸೆಕ್ಷನ್188 ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ವಿಡೀಯೋ ಸಂದೇಶ

ಕರಾವಳಿ ಕರ್ನಾಟಕ ವರದಿ
ಉಡುಪಿ: ಹೊಟೇಲ್ ಹಾಗೂ ಸರಕಾರಿ ಕ್ವಾರಂಟೈನ್ ನಲ್ಲಿರುವವರು ಹೊರಗೆ ಬಂದು ಓಡಾಡಿದರೆ ಮುಲಾಜಿಲ್ಲದೇ ಸೆಕ್ಷನ್188 ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ವಿಡೀಯೋ ಸಂದೇಶದ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ವಿದೇಶ ಮತ್ತು ಹೊರರಾಜ್ಯದಿಂದ ಸುಮಾರು ಆರು ಸಾವಿರ ಮಂದಿ ಜಿಲ್ಲೆಗೆ ಆಗಮಿಸಿದ್ದು, ಅವರನ್ನು ಸ್ವಾಗತಿಸಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಈಗ ಕೆಲವು ಮಂದಿ ಹೊರಗೆ ಓಡಾಡುತ್ತಿದ್ದರೆಂಬ ವ್ಯಾಪಕ ದೂರುಗಳಿವೆ ಎಂದು ಡಿಸಿ ತಿಳಿಸಿದ್ದಾರೆ.

ಈ ಬಗ್ಗೆ ಕ್ವಾರಂಟೈನ್‌ನಲ್ಲಿರುವ ಜನರು ಎಚ್ಚರಿಕೆವಹಿಸಬೇಕಾಗಿದೆ. ಹೊರಗೆ ಬಂದು ಜನ ಸಂಪರ್ಕ ಮಾಡುವುದು ಎಪಿಡೆಮಿಕ್ ರೆಗ್ಯುಲೇಷನ್ ಕಾಯ್ದೆಗೆ ವಿರುದ್ಧವಾಗಿದೆ. ನಿಮ್ಮಿಂದ ಯಾರಿಗೂ ಕೊರೋನಾ ಹರಡದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಇದನ್ನು ಅರ್ಥ ಮಾಡಿಕೊಳ್ಳಿ. ಆದೇಶ ಪಾಲಿಸಿ ಎಂದು ಕೋರಿದ್ದಾರೆ.

ಕ್ವಾರಂಟೈನ್ ಕೇಂದ್ರಗಳಲ್ಲಿ ಶೌಚಾಲಯ, ಸ್ಚಚ್ಛತೆ ಇಲ್ಲದ ಬಗ್ಗೆ ವ್ಯಾಪಕ ದೂರುಗಳಿವೆ. ಶೌಚಾಲಯ ಇಲ್ಲದ ಕಟ್ಟಡಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಬಳಸಕೂಡದು. ಅಂಥ ಕೇಂದ್ರಗಳನ್ನು ಕ್ವಾರಂಟೈನ್ ಪಟ್ಟಿಯಿಂದ ತೆಗೆದುಹಾಕುವಂತೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಹೇಳಿದ್ದಾರೆ.

ಕ್ವಾರಂಟೈನ್‌ಗೆ ಒಳಗಾದ ಕೆಲವರು ಕೂಡ ತಾವು ರಜೆ ಕಳೆಯಲು ಬಂದವರಂತೆ ಸ್ವಚ್ಛತೆ ಕಾಪಾಡುವುದರತ್ತ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ನಿಯಮಗಳಿಗೆ ಬೆಲೆ ಕೊಡುತ್ತಿಲ್ಲ ಎಂಬ ಮಾತುಗಳೂ ಕೇಳಿಬಂದಿರುವುದನ್ನು ಡಿಸಿ ಜಗದೀಶ್ ಎಚ್ಚರಿಕೆ ಹಿನ್ನೆಲೆಯಲ್ಲಿ ಗಮನಿಸಬಹುದಾಗಿದೆ.

 

Get real time updates directly on you device, subscribe now.