ಕುಂದಾಪುರ: ಯುವತಿ ಚುಡಾವಣೆ ಸಂಬಂಧ ತಂಡಗಳ ನಡುವೆ ಹೊಯ್‌ಕೈ, ಬೆಂಬತ್ತಿದ ಕಾರು ಪಲ್ಟಿ

ಯುವತಿ ಚುಡಾವಣೆಗೆ ಸಂಬಂಧಿಸಿ ಮರವಂತೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಬಡಿದಾಟ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ನಾವುಂದ ಗ್ರಾಮದ ಯುವತಿ ಚುಡಾವಣೆ ಸಂಬಂಧ ಎರಡು ತಂಡಗಳ ನಡುವೆ ಮರವಂತೆ ಮಸೀದಿ ಬಳಿ ಜಗಳ ನಡೆದಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ತಂಡಗಳು ಕಾರುಗಳಲ್ಲಿ ಚೇಸಿಂಗ್ ನಡೆಸಿದ ಸಂದರ್ಭ ಒಂದು ಕಾರು ಪಲ್ಟಿಯಾದ ಘಟನೆ ವರದಿಯಾಗಿದೆ.

ಯುವತಿ ಚುಡಾವಣೆಗೆ ಸಂಬಂಧಿಸಿ ಮರವಂತೆಯಲ್ಲಿ ಎರಡು ಗುಂಪುಗಳ ನಡುವೆ ಮೇ.19ರಂದು ಗಲಾಟೆ ನಡೆದಿದ್ದು, ಗಂಗೊಳ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ಬಡಾಕೆರೆಯ ಮೊಹ್ಮದ್ ಆಸೀಫ್ ನಾವುಂದ ಕಡೆಯಿಂದ ಉಪ್ಪಿನಂಗಡಿಗೆ ಕಾರಿನಲ್ಲಿ ಹೋಗುತ್ತಿರುವಾಗ ವಿಷಯಕ್ಕೆ ಸಂಬಂಧಿಸಿ ಎರಡು ಕಾರುಗಳಲ್ಲಿ ಬಂದ ಜನ ಬೆನ್ನಟಿದ್ದು, ತ್ರಾಸಿ ಅಣ್ಣಪ್ಪಯ್ಯ ಹಾಲ್ ಬಳಿ ಕಾರು ತಡೆದು ಹಲ್ಲೆಗೈದಾಗ, ಆಸೀಫ್ ಅವರಿಂದ ತಪ್ಪಿಸಿಕೊಂಡು ಕಾರನ್ನು ಓಡಿಸಿದಾಗ, ನಿಯಂತ್ರಣ ತಪ್ಪಿದ ಆಸೀಫ್ ಅವರ ಬಲೆನೊ ಕಾರು ಹಟ್ಟಿಯಂಗಡಿ ಗ್ರಾಮದ ಕನ್ಯಾನ ಗುಡ್ಡೆಅಂಗಡಿ ಬಳಿ ಪಲ್ಟಿಯಾಗಿದೆ.

ಆಸಿಫ್ ಅವರು ಬೆಂಬತ್ತಿ ಬಂದವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕನ್ಯಾನ ಬಳಿ ಹೋಗುವಾಗ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತು ಎಂದು ಆಸೀಫ್ ನೀಡಿದ ದೂರಿನನ್ವಯ ಮೊಹ್ಮದ್ ರಿಯಾಜ್, ಅಶ್ಫಕ್ ಅಹ್ಮದ್, ಮೊಹ್ಮದ್ ಅಶ್ರಫ್, ಅಹ್ಮದ್ ಮತ್ತು ಸತೀಶ್ ಎಂಬವರ ವಿರುದ್ಧ ಪ್ರಕರಣ ದಾಕಲಾಗಿದೆ. ಮೊಹ್ಮದ್ ಅಶ್ರಫ್ ಎಂಬವರು ಪ್ರತಿ ದೂರು ನೀಡಿದ್ದು, ಆಸೀಫ್ ಹಾಗೂ ನಾಲ್ವರ ವಿರುದ್ಧವೂ ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎರಡೂ ತಂಡಗಳ ಸದಸ್ಯರು ಪರಸ್ಪರ ತಲವಾರ್ ಹಲ್ಲೆಗೆ ಯತ್ನಿಸಿದ್ದಾಗಿ ಪೊಲೀಸರಿಗೆ ದೂರಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಜನ ಗುಂಪುಗೂಡಬಾರದೆಂದು ಆದೇಶ ಇರುವಾಗಲೂ ಗುಂಪು ಹಲ್ಲೆ ನಡೆದ ಬಗ್ಗೆಯೂ ಪೊಲೀಸರು ಸೂಕ್ತ ಸೆಕ್ಷನ್ ಅನ್ವಯ ಇತ್ತಂಡಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.