ಕಾರ್ಕಳ, ವಡ್ಡರ್ಸೆ ಕಂಟೈನ್ಮೆಂಟ್ ವಲಯದಲ್ಲಿ ಡಿಸಿ ಪರಿಶೀಲನೆ

ಪೊಲೀಸ್ ಸಿಬಂದಿಯಲ್ಲಿ ಕೊರೋನ ದೃಢವಾಗಿರುವ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ವಲಯ ಎಂದು ಘೋಷಿಸಿರುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ.

ವಡ್ಡರ್ಸೆ ಯಾಳಕ್ಲು ಬೇಳೂರು ಸಂಪರ್ಕಿಸುವ ರಸ್ತೆ ಮತ್ತು ಎಂ.ಜಿ ಕಾಲನಿ ಸೇರುವ ರಸ್ತೆಗೆ ಬ್ಯಾರೀಕೇಡ್ ಹಾಕಿ ಸೀಲ್ ಡೌನ್.

ಕರಾವಳಿ ಕರ್ನಾಟಕ ವರದಿ
ಉಡುಪಿ: ಕಾರ್ಕಳದಲ್ಲಿ ಪೊಲೀಸ್ ಸಿಬಂದಿ ಓರ್ವರಲ್ಲಿ ಕೊರೋನ ದೃಢವಾಗಿರುವ ಹಿನ್ನೆಲೆಯಲ್ಲಿ ಕಾರ್ಕಳ ಗ್ರಾಮಾಂತರ, ನಗರ ಮತ್ತು ಸರ್ಕಲ್ ಇನ್ಸೆಪೆಕ್ಟರ್ ಕಚೇರಿ ಇರುವ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ಈಗ ಮೂರು ಪೊಲೀಸ್ ಠಾಣೆಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಠಾಣೆಗಳಿಗೆ ಬದಲಿ ವ್ಯವಸ್ಥೆ ಮಾಡಲಾಗುತ್ತಿದೆ. ಅಜೆಕಾರು ಠಾಣೆಯು ಅಜೆಕಾರು ಮುಖ್ಯ ರಸ್ತೆಯಲ್ಲಿರುವ ಅಂಗನವಾಡಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕಾರ್ಕಳ ಠಾಣೆಯನ್ನು ಡಿಎಸ್ಪಿ ಕಾರ್ಕಳ ಕಚೇರಿಯ ಎದುರಿಗಿರುವ ಪುರಸಭಾ ಭವನಕ್ಕೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಅಜೆಕಾರು ಪೊಲೀಸ್ ಠಾಣೆಯ ಎ.ಎಸ್ಸೈಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತೆಂಕನಿಡಿಯೂರು ಗ್ರಾಮದ ಗರಡಿಮಜಲುವಿನಲ್ಲಿಯ ಎರಡು ಪೊಲೀಸ್ ಕ್ವಾಟ್ರಸ್ ಪ್ರದೇಶವನ್ನು ಕಂಟೈನ್‌ಮೆಂಟ್ ಝೋನ್ ಎಂದು ಗುರುತಿಸಲಾಗಿದ್ದು, ಸೀಲ್‌ಡೌನ್ ಮಾಡಲಾಗಿದೆ. ಇಲ್ಲಿಯ ಎ,ಬಿ,ಸಿ ಎಂಬ ಮೂರು ಕ್ವಾಟ್ರಸ್‌ಗಳಲ್ಲಿ ಬಿ ಮತ್ತು ಸಿ ಬ್ಲಾಕ್ ಸೀಲ್ ಡೌನ್ ಮಾಡಲಾಗಿದೆ. ಸುತ್ತಲಿನ ಒಂದು ಕಿ.ಮೀ ಪ್ರದೇಶ ಬಫರ್ ಝೋನ್ ಎಂದು ಘೋಷಿಸಲಾಗಿದೆ. ಇಲ್ಲಿರುವರಿಗೆ ಹದಿನಾಲ್ಕು ದಿನ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕೊರೋನಾ ಸೋಂಕಿತ ಪೊಲೀಸ್ ಕಾನ್ಸ್ಟೇಬಲ್ ಅವರು ಕೋಟ ಸಮೀಪದ ವಡ್ಡರ್ಸೆ ನಿವಾಸಿಯಾಗಿರುವುದರಿಂದ ಯಾಳಕ್ಲು ಬೇಳೂರು ಸಂಪರ್ಕಿಸುವ ರಸ್ತೆ ಮತ್ತು ಎಂ.ಜಿ ಕಾಲನಿ ಸೇರುವ ರಸ್ತೆಗೆ ಬ್ಯಾರೀಕೇಡ್ ಹಾಕಿ ಸೀಲ್ ಡೌನ್ ಮಾಡಲಾಗಿದೆ. ಒಂದು ಕಿ.ಮೀ ಸುತ್ತಲಿನ ನಿವಾಸಿಗಳಿಗೆ ಒಳ, ಹೊರಗೆ ಹೋಗುವುದನ್ನು ನಿಷೇಧಿಸಲಾಗಿದೆ. ಡಿಸಿ ಜಗದೀಶ್ ಅವರು ಕುಂದಾಪುರ ಸಹಾಯಕ ಆಯುಕ್ತ, ಬ್ರಹ್ಮಾವರ ತಹಶೀಲ್ದಾರ್, ಡಿ.ಎಚ್.ಒ, ಡಿವೈಎಸ್ಪಿ , ಕೋಟ ಠಾಣಾಧಿಕಾರಿ ಮೊದಲಾದವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸೋಂಕಿತ ಪೊಲೀಸ್ ಸಿಬಂದಿಯ ಕುಟುಂಬವನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಬ್ರಹ್ಮಾವರ ಠಾಣೆಯನ್ನು ಠಾಣೆಯ ಹಿಂಭಾಗದಲ್ಲಿರುವ ಹಳೆ ಪೊಲೀಸ್ ಠಾಣಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಸ್ಥಳಾಂತರಗೊಂಡ ಠಾಣೆಗಳಲ್ಲಿ ಜನ ಭೇಟಿ ನೀಡಬಹುದೆಂದು ಎಸ್ಪಿ ಕಚೇರಿ ತಿಳಿಸಿದೆ.

ಸೋಂಕಿತ ಪೊಲೀಸ್ ಸಿಬಂದಿಗಳನ್ನು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

 

Get real time updates directly on you device, subscribe now.