ಉಡುಪಿ ಡಿಸಿಯ ಬೇಜವಾಬ್ದಾರಿ ವಿರುದ್ಧ ಕ್ರಮ ಜರುಗಿಸಿ: ಮುಖ್ಯಮಂತ್ರಿಗೆ ಪ್ರಮೋದ್ ಮಧ್ವರಾಜ್ ಒತ್ತಾಯ
ದುಬೈಯಿಂದ ಬಂದ ಮಹಿಳೆಯ ಕ್ವಾರಂಟೈನ್ ಅವಧಿ ಮುಗಿದರೂ ಸರಕಾರದ ಕ್ವಾರಂಟೈನ್ ನಿಯಮಗಳಿಗೆ ವಿರುದ್ಧವಾಗಿ ಹದಿನೈದು ದಿನಗಳ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಬೇಜವಾಬ್ದಾರಿಯ ಪ್ರಶ್ನೆಯೇ ಇಲ್ಲ ಎಂದ ಜಿಲ್ಲಾಧಿಕಾರಿ.
ಕರಾವಳಿ ಕರ್ನಾಟಕ ವರದಿ
ಉಡುಪಿ: ಕ್ವಾರಂಟೈನ್ ಅವಧಿ ಮುಗಿದರೂ ದುಬೈಯಿಂದ ಬಂದಿರುವ ಗರ್ಭಿಣಿಯನ್ನು ಮನೆಗೆ ಕಳಿಸದ ಜಿಲ್ಲಾಧಿಕಾರಿ ಬೇಜವಾಬ್ದಾರಿಯ ವರ್ತನೆ ತೋರಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಿಎಂ ಯಡಿಯೂರಪ್ಪ ಅವರನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಒತ್ತಾಯಿಸಿದ್ದಾರೆ.
ದುಬೈಯಿಂದ ಬಂದ ಮಹಿಳೆಯ ಕ್ವಾರಂಟೈನ್ ಅವಧಿ ಮುಗಿದರೂ ಸರಕಾರದ ಕ್ವಾರಂಟೈನ್ ನಿಯಮಗಳಿಗೆ ವಿರುದ್ಧವಾಗಿ ಅವರನ್ನು ಹದಿನೈದು ದಿನಗಳ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಗರ್ಭಿಣಿ ಮಹಿಳೆಗೆ ಮನೆಯಿಂದ ಪೂರೈಸಲಾಗುತ್ತಿದ್ದ ಆಹಾರವನ್ನು ಕೂಡ ಜಿಲ್ಲಾಡಳಿತ ನಿಲ್ಲಿಸಿದೆ ಎಂದು ಪ್ರಮೋದ್ ಮಧ್ವರಾಜ್ ಅವರು ಟ್ವೀಟ್ ಮೂಲಕ ದೂರಿದ್ದಾರೆ.
ಈ ವಿಷಯದಲ್ಲಿ ಬೇಜವಾಬ್ದಾರಿಯ ಪ್ರಶ್ನೆಯೇ ಇಲ್ಲ. ಜಿಲ್ಲೆಗೆ ಎಂಟು ಸಾವಿರ ಮಂದಿ ಹೊರರಾಜ್ಯ ಮತ್ತು ವಿದೇಶದಿಂದ ಬಂದಿದ್ದು, ಇವರೆಲ್ಲರನ್ನೂ ಸೂಕ್ತ ಪರೀಕ್ಷೆ ಮಾಡಿಯೇ ಬಿಡಬೇಕಾಗುತ್ತದೆ. ಗರ್ಭಿಣಿ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣ ಅವರನ್ನು ಹದಿನಾಲ್ಕು ದಿನಗಳ ಬಳಿಕ ಪರೀಕ್ಷೆ ಮಾಡಿಯೇ ಬಿಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ಪ್ರಮೋದ್ ಮಧ್ವರಾಜ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ.