ಕುಂದಾಪುರ: ಬಾವಿಗೆ ಬಿದ್ದು ಸೇನಾಪುರ ಗ್ರಾಮದ ವ್ಯಕ್ತಿ ಸಾವು, ಸಹೋದರ ಅಸ್ವಸ್ಥ

ಅಗ್ನಿಶಾಮಕ ದಳ ಬಂದು ಇಬ್ಬರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ವಾಲ್ಟರ್ ಸಾವಪ್ಪಿರುವುದಾಗಿ ತಿಳಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಸೇನಾಪುರ ಗ್ರಾಮದ ಗುಡ್ಡಮಾಡಿ ನಿವಾಸಿಯೋರ್ವರು ಆಯ ತಪ್ಪಿ ಬಾವಿಗೆ ಬಿದ್ದ ಸಂದರ್ಭ ಸಾವಪ್ಪಿದ್ದು, ರಕ್ಷಣೆಗೆ ಬಾವಿಗಿಳಿದ ಅವರ ಸಹೋದರ ಕೂಡ ಅಸ್ವಸ್ಥಗೊಂಡ ಘಟನೆ ವರದಿಯಾಗಿದೆ.

ಮೃತರನ್ನು ವಾಲ್ಟರ್ ಡಿ’ಆಲ್ಮೇಡ(50) ಎಂದು ಗುರುತಿಸಲಾಗಿದೆ. ವಾಲ್ಟರ್ ಅವರ ಸಹೋದರ ಅಲ್ಬನ್ ಅವರು ಅಸ್ವಸ್ಥಗೊಂಡಿದ್ದು, ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಲ್ಟರ್ ಅವರು ಬಿದ್ದ ಬಾವಿ ಇಕ್ಕಟ್ಟಾಗಿದ್ದು, ಆಮ್ಲಜನಕದ ಕೊರತೆ ಇತ್ತೆಂದು ಹೇಳಲಾಗಿದೆ. ವಾಲ್ಟರ್ ಅವರಿಗೆ ಬಾವಿಯಿಂದ ಮೇಲೆ ಬರಲು ಅಸಾಧ್ಯವಾದ ಕಾರಣ ಸಹೋದರ ಅಲ್ಬನ್ ಅವರು ಕೆಳಗೆ ಇಳಿದಿದ್ದು, ಇಬ್ಬರಿಗೂ ಮೇಲೆ ಬರಲಾಗಲಿಲ್ಲ. ಅಗ್ನಿಶಾಮಕ ದಳ ಬಂದು ಇಬ್ಬರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ವಾಲ್ಟರ್ ಸಾವಪ್ಪಿರುವುದಾಗಿ ತಿಳಿಸಿದ್ದಾರೆ.

ಲಾಕ್‌ಡೌನ್ ಬಳಿಕ ಊರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದು, ಸಹೋದರರಿಬ್ಬರೂ ಕಠಿಣ ಪರಿಶ್ರಮಿಗಳಾಗಿದ್ದರು ಎಂದು ಸ್ಥಳಿಯರು ತಿಳಿಸಿದ್ದಾರೆ.

ಗಂಗೊಳ್ಳಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

ವಾಲ್ಟರ್ ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Get real time updates directly on you device, subscribe now.