ಕೋವಿಡ್ ಸೋಂಕಿತರ ಹೆಚ್ಚಳ: ಕುಂದಾಪುರ, ಕೊಲ್ಲೂರುಗಳಲ್ಲಿ ಸಂಪೂರ್ಣ ಕೋವಿಡ್ ಆಸ್ಪತ್ರೆ

ಕುಂದಾಪುರ ಸರಕಾರಿ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಕಾರ್ಯಾಚರಿಸುವುದರಿಂದ ಇಲ್ಲಿನ ಗರ್ಭಿಣಿಯರು ಮತ್ತು ಬಾಣಂತಿಯರನ್ನು ಕೋಟ ಮತ್ತು ಬ್ರಹ್ಮಾವರ ಸಮುದಾಯ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದೆಂದು ಡಿಸಿ ಹೇಳಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಬೈಂದೂರಿನಲ್ಲಿ ಕೂಡ ಮಹಾರಾಷ್ಟ್ರದಿಂದ ಬಂದವರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಕೊಲ್ಲೂರಿನ ಲಲಿತಾಂಬಿಕಾ ಗೆಸ್ಟ್ ಹೌಸ್ ಅನ್ನು ಇನ್ನೂರು ಬೆಡ್‌ಗಳ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುವುದೆಂದು ಡಿಸಿ ಜಗದೀಶ್ ಹೇಳಿದ್ದಾರೆ.

ಕುಂದಾಪುರ ಸರಕಾರಿ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಕಾರ್ಯಾಚರಿಸುವುದರಿಂದ ಇಲ್ಲಿನ ಗರ್ಭಿಣಿಯರು ಮತ್ತು ಬಾಣಂತಿಯರನ್ನು ಕೋಟ ಮತ್ತು ಬ್ರಹ್ಮಾವರ ಸಮುದಾಯ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದೆಂದು ಡಿಸಿ ಹೇಳಿದ್ದಾರೆ. ಬೇರೆ ಕಾಯಿಲೆಯಿರುವ ಒಳರೋಗಿಗಳನ್ನು ಉಡುಪಿ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗುತ್ತದೆ. ಹೊರರೋಗಿಗಳನ್ನು ಕುಂದಾಪುರದ ವಿನಯ ಆಸ್ಪತ್ರೆಗೆ ವರ್ಗಾಯಿಸಲಾಗುತ್ತದೆ.

ತಾಪಂ ಸಭಾಂಗಣದಲ್ಲಿ ಶಾಸಕರು, ವೈದ್ಯಾಧಿಕಾರಿಗಳು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬಂದ ಅವರು ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದರು.

ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ 120ಬೆಡ್‌ಗಳಿದ್ದು, ಹಳೆ ಕಟ್ಟಡದ 80ಬೆಡ್‌ಗಳನ್ನು ಕೂಡ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ಮೀಸಲಿರಿಸಲಾಗುತ್ತದೆ. ಆದರ್ಶ ಆಸ್ಪತ್ರೆಯಲ್ಲಿ 65 ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕುಂದಾಪುರ ಮತ್ತು ಬೈಂದೂರುಗಳಲ್ಲಿ ಪಾಸಿಟಿವ್ ಪ್ರಕರಣಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಲಕ್ಷಣಗಳಿರುವವರು, ಗರ್ಭಿಣಿಯರನ್ನು ಉಡುಪಿ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಲಾಗುವುದು ಎಂದು ಡಿಸಿ ಮಾಹಿತಿ ನೀಡಿದರು.

ಸೀಲ್ ಡೌನ್ ಮಾಡಲಾದ ಮನೆಗಳಿರುವ ಪ್ರದೇಶಕ್ಕೆ ಬೇಟಿ ಕೊಡುವುದು ಮತ್ತು ಅಲ್ಲಿಂದ ಹೊರ ಬರುವುದನ್ನು ನಿರ್ಬಂಧಿಸಲಾಗಿದೆ. ಕಾನೂನು ಉಲ್ಲಂಘಿಸಿದರೆ ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಅಸಿಸ್ಟೆಂಟ್ ಕಮಿಷನರ್ ರಾಜು, ಕುಂದಾಪುರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರೊಬರ್ಟ್ ರೆಬೆಲ್ಲೊ, ತಾ. ಆರೋಗ್ಯ ಅಧಿಕಾರಿ ಡಾ. ನಾಗಭೂಷಣ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.