ಕಾರ್ಕಳ ಬಿಜೆಪಿಗರ ಬರ್ತ್‌ಡೇ ಪಾರ್ಟಿಯಲ್ಲಿ ಕ್ವಾರಂಟೈನ್‌ಗೆ ಒಳಗಾದವರು ಇರಲಿಲ್ಲ

ಹುಟ್ಟುಹಬ್ಬ ಆಚರಣೆ ಸುದ್ದಿ ವ್ಯಾಪಕ ಪ್ರಚಾರ ಪಡೆಯುವಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡವಿದೆ ಎಂದು ಅಸಮಾಧಾನ.

ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿದ್ದು ನಿಜ. ಅಂದು ಸಾಮಾಜಿಕ ಅಂತರ ಕಾಪಾಡಲಿಲ್ಲ ಎಂಬುದು ಕೂಡ ನಿಜ.

ಕರಾವಳಿ ಕರ್ನಾಟಕ ವರದಿ
ಕಾರ್ಕಳ: ‘ಕ್ವಾರಂಟೈನ್ ಕೇಂದ್ರದಲ್ಲಿ ಬಿಜೆಪಿ ನಾಯಕರ ಬರ್ತ್‌ಡೇ ಪಾರ್ಟಿ’ ಬಗ್ಗೆ  ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಕರುಣಾಕರ ಕೋಟ್ಯಾನ್ ಅವರು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ನಾಯಕರು ಕ್ವಾರಂಟೈನ್ ಕೇಂದ್ರದಲ್ಲಿದ್ದ ಜನರೊಂದಿಗೆ ಸೇರಿ ಬರ್ತ್‌ಡೇ ಪಾರ್ಟಿ ಮಾಡಿಲ್ಲ ಎಂದು ಹೇಳಿದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿ ಸ್ವಯಂ ಸೇವಕರಾಗಿ ಸೇವೆ ನೀಡಿದ್ದ ಪ್ರಶಾಂತ್ ಮತ್ತು ಇತರರು ಪ್ರತ್ಯೇಕ ಕೋಣೆಯಲ್ಲಿ ಇರುತ್ತಿದ್ದರು. ಮೇ.21ರ ರಾತ್ರಿ ಪ್ರಶಾಂತ್ ಅವರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿದ್ದು ನಿಜ. ಅಂದು ಸಾಮಾಜಿಕ ಅಂತರ ಕಾಪಾಡಲಿಲ್ಲ ಎಂಬುದು ಕೂಡ ನಿಜ. ಆದರೆ ನಾವು ಕ್ವಾರಂಟೈನ್ ಕೇಂದ್ರದಲ್ಲಿರುವ ಜನರನ್ನು ಸೇರಿಸಿಕೊಂಡು ಹುಟ್ಟುಹಬ್ಬ ಆಚರಿಸಿಲ್ಲ ಎಂಬುದನ್ನು ಕೂಡ ಗಮನಿಸಬೇಕು ಎಂದು ಹೇಳಿದ್ದಾರೆ.

ಕ್ವಾರಂಟೈನ್ ಕೇಂದ್ರದಲ್ಲಿರುವ ವ್ಯಕ್ತಿಗಳು ತಮ್ಮ ಕೋಣೆಯಲ್ಲಿ ಮಕ್ಕಳ ಹುಟ್ಟುಹಬ್ಬ ಕೇಕ್ ಕತ್ತರಿಸಿ ಆಚರಿಸಿದ ಸಂದರ್ಭದಲ್ಲೂ ನಾವು ಆಕ್ಷೇಪ ವ್ಯಕ್ತಪಡಿಸಿಲ್ಲ. ಹುಟ್ಟುಹಬ್ಬದ ಆಚರಣೆಯಲ್ಲಿ ಯಾವುದೇ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹುಟ್ಟುಹಬ್ಬ ಆಚರಣೆ ಸುದ್ದಿ ವ್ಯಾಪಕ ಪ್ರಚಾರ ಪಡೆಯುವಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದವರೆಲ್ಲ ಕೊರೋನ ಸೋಂಕಿತರಲ್ಲ. ಅವರು ಶಂಕಿತರು ಮಾತ್ರ. ಕ್ವಾರಂಟೈನ್ ಕೇಂದ್ರ ಎನ್ನುವುದು ಉಗ್ರಗಾಮಿಗಳ ಶಿಬಿರ ಅಲ್ಲ. ಕಾಂಗ್ರೆಸ್ ಮುಖಂಡರು ಜನರ ಸೇವೆಗೆ ಮುಂದಾಗದೇ ಈಗ ಈ ಘಟನೆಯಿಂದ ಪ್ರಚಾರ ಪಡೆದುಕೊಂಡರೆ ಜನ ಅವರನ್ನು ಕ್ಷಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಯುವ ಮೋರ್ಚಾದ ರಾಕೇಶ್ ಅಮೀನ್, ಭರತ್ ಜೈನ್, ರಾಜೇಶ್ ಕೋಟ್ಯಾನ್, ನವೀನ್ ಮೊದಲಾದವರು ಈ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಕಾರ್ಕಳ ಕ್ವಾರಂಟೈನ್ ಕೇಂದ್ರದಲ್ಲಿ ಬಿಜೆಪಿ ಬರ್ತ್‌ಡೇ ಪಾರ್ಟಿ : ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಡ

ಮುಂಬೈಯಿಂದ ಬಂದು ಕ್ವಾರಂಟೈನ್ ಕೇಂದ್ರದಲ್ಲಿರುವವರ ಜೊತೆ ಹುಟ್ಟುಹಬ್ಬ ಆಚರಿಸಿರುವ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಜರುಗಿಸಬೇಕೆಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಆಗ್ರಹಿಸಿದ್ದಾರೆ.

ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕರುಣಾಕರ ಕೋಟ್ಯಾನ್, ಕಾಂತಾವರ ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಯುವ ಮೋರ್ಚಾ ಕಾರ್ಯದರ್ಶಿ ನವೀನ್ ಕಾಂತಾವರ ಕಾರ್ಕಳ ತಾಲೂಕಿನ ಶಾಲೆಯೊಂದರಲ್ಲಿ ಭರ್ಜರಿ ಬರ್ತ್‌‍ಡೆ ಪಾರ್ಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕ್ವಾರಂಟೈನ್ ಕೇಂದ್ರಗಳು ಮೋಜಿನ ತಾಣಗಳಾಗುತ್ತಿವೆ. ಇಂಥ ಘಟನೆಗಳು ಮರುಕಳಿಸಬಾರದು ಎಂದಾದರೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಆಗ್ರಹಿಸಿದ್ದಾರೆ.

Get real time updates directly on you device, subscribe now.