ಕುಂದಾಪುರ: ಜಿಲ್ಲಾಡಳಿತ ವಿರುದ್ಧ ಮಾನಹಾನಿಕರ ಸಂದೇಶ, ಕಮಲಶಿಲೆಯ ಯುವಕ ಬಂಧನ

ಕೊರೋನ ಸೋಂಕಿನ ಲಕ್ಷಣಗಳಿಲ್ಲದಿದ್ದರೂ ಪ್ರತೀ ಪ್ರಕರಣಕ್ಕೆ 3,50,000ರೂ. ಭಾರೀ ಮೊತ್ತ ವಸೂಲು ಮಾಡುತ್ತಾರೆ ಎಂದು ಕಳಿಸಿದ ವಾಟ್ಸ್ಯಾಪ್ ಸಂದೇಶ ವೈರಲ್ ಆಗಿತ್ತು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಜಿಲ್ಲಾಡಳಿತವು ಕೊರೋನಾ ಸೋಂಕಿನ ಲಕ್ಷಣ ಇಲ್ಲದ ವ್ಯಕ್ತಿಗಳನ್ನು ಕೂಡ ಕೂಡಿ ಹಾಕಿ ಲಕ್ಷಾಂತರ ರೂ. ವಸೂಲಿ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಕಳಿಸಿದ ಆರೋಪದಲ್ಲಿ ಕಮಲಶಿಲೆಯ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕಮಲಶಿಲೆಯ ಸುರೇಶ್ ಕುಲಾಲ್(27) ಎಂಬಾತ ಬಂಧಿತನಾಗಿದ್ದಾನೆ.

ಕುಂದಾಪುರ ತಾಲೂಕಿನಲ್ಲಿ ಹದಿನಾಲ್ಕು ದಿನ ಕ್ವಾರಂಟೈನ್ ಅವಧಿ ಮುಗಿದರೂ ಕೊರೋನ ಸೋಂಕಿನ ಲಕ್ಷಣಗಳಿಲ್ಲದಿದ್ದರೂ ಆರೋಗ್ಯ ಕೇಂದ್ರದಲ್ಲಿ ಕರೆಸಿಕೊಂಡು ಪ್ರತೀ ಪ್ರಕರಣಕ್ಕೆ 3,50,000ರೂ. ಭಾರೀ ಮೊತ್ತ ವಸೂಲು ಮಾಡುತ್ತಾರೆ ಎಂದು  ಕಳಿಸಿದ ವಾಟ್ಸ್ಯಾಪ್ ಸಂದೇಶ ವೈರಲ್ ಆಗಿತ್ತು.

ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಸುರೇಶ್ ಕುಲಾಲ್ ವಾಟ್ಸ್ಯಾಪ್ ನಲ್ಲಿ ದೊರೆತ ಮಾಹಿತಿಗಳ ಮೇಲೆ ತಾನು ಈ ರೀತಿ ವಾಟ್ಸ್ಯಾಪ್ ಸಂದೇಶ ಹರಿಯಬಿಟ್ಟಿದ್ದೆ ಎಂದು ತನಿಖೆ ಸಂದರ್ಭ ಹೇಳಿದ್ದಾನೆ.

ಈ ವಾಟ್ಸ್ಯಾಪ್ ಸಂದೇಶವನ್ನು ಕುಂದಾಪುರ ತಾಲೂಕಿನಲ್ಲಿ ಓದದೇ ಇರುವವರು ಇಲ್ಲ ಎಂಬಷ್ಟರ ಮಟ್ಟಿಗೆ ಇದು ಫಾರ್ವರ್ಡ್ ಆಗಿ ಜನರ ನೆಮ್ಮದಿ ಭಂಗ ಮಾಡಿತ್ತು. ವಂಡ್ಸೆ ಕಂದಾಯ ನಿರೀಕ್ಷಕ ರಾಘವೇಂದ್ರ ಅವರು ಶಂಕರನಾರಾಯಣ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಆರೋಪಿಯನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆ ಮಾಡಿದೆ.

 

Get real time updates directly on you device, subscribe now.