ಕುಂದಾಪುರ: ಹೆಸ್ಕತ್ತೂರು ಸರಕಾರಿ ಹೈಸ್ಕೂಲ್ ಮುಖ್ಯೋಪಾಧ್ಯಾಯರಿಗೆ ಶಿಕ್ಷಣ ಸಚಿವರ ಫುಲ್‌ಮಾರ್ಕ್ಸ್

ಪ್ರಾಮಾಣಿಕ ಸೇವೆ ನೀಡಿದವರಿಗೆ ಒಂದು ದಿನ ಗೌರವ ದೊರೆಯುತ್ತದೆ ಎಂಬ ಭರವಸೆ ನನಗಿತ್ತು. ಸಚಿವರ ಫೋನ್ ಕರೆಯಿಂದ ಖುಶಿಯಾಗಿದೆ.

ಲಾಕ್‌ಡೌನ್ ಸಂದರ್ಭ ಶಾಲೆಗೆ ವಿದ್ಯಾರ್ಥಿಗಳು ಮಾಹಿತಿಗಾಗಿ ಹೋಗುತ್ತಿದ್ದ ಬಗ್ಗೆ ಆಕ್ಷೇಪಗಳು ಬಂದಾಗ ಪೊಲೀಸರು ವಿದ್ಯಾರ್ಥಿಗಳು ಶಾಲೆಗೆ ಹೋಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದರು. ಈ ಸಂದರ್ಭ ಬಾಬು ಶೆಟ್ಟಿಯವರು ಎಸ್.ಎಸ್.ಎಲ್.ಸಿ ಕಲಿಯುತ್ತಿರುವ ನಲವತ್ತ್ಮೂರು ಮಕ್ಕಳ ಬಳಿ ತೆರಳಿ ಮಕ್ಕಳಿಗೆ ತಿಳಿಯದ ವಿಷಯಗಳ ಬಗ್ಗೆ ಶಿಕ್ಷಣಾಭ್ಯಾಸ ನೀಡಿದ್ದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಉಡುಪಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಸಿದ್ಧತೆಯ ಪರಿಶೀಲನಾ ಸಭೆಗೆ ಆಗಮಿಸಿದಾಗ  ಪರಿಚಯವಾದ ಹೆಸ್ಕತ್ತೂರು ಸರಕಾರಿ ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಬಾಬು ಶೆಟ್ಟಿಯವರಿಗೆ ದೂರವಾಣಿ ಕರೆ ಮಾಡಿ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.

ಕೋವಿಡ್ ಲಾಕ್‌ಡೌನ್ ಸಂದರ್ಭ ತನ್ನ ಶಾಲೆಯ SSLC ತರಗತಿಯ ನಲವತ್ತಮೂರು ಮಕ್ಕಳ ಮನೆಗೆ ತಾನೇ ತೆರಳಿ ಅವರಿಗೆ ಪಾಠ ಹೇಳಿ, ತಿಳಿಯದ ಸಂಗತಿಗಳ ಕುರಿತು ಮತ್ತೆ ಮತ್ತೆ ತಿಳುವಳಿಕೆ ನೀಡುತ್ತಿರುವ ಮಹನೀಯರು ಇವರು ಎಂದು ಸುರೇಶ್ ಕುಮಾರ್ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಲಾಕ್‌ಡೌನ್ ಸಂದರ್ಭ ಶಾಲೆಗೆ ವಿದ್ಯಾರ್ಥಿಗಳು ಮಾಹಿತಿಗಾಗಿ ಹೋಗುತ್ತಿದ್ದ ಬಗ್ಗೆ ಆಕ್ಷೇಪಗಳು ಬಂದಾಗ ಪೊಲೀಸರು ವಿದ್ಯಾರ್ಥಿಗಳು ಶಾಲೆಗೆ ಹೋಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದರು. ಈ ಸಂದರ್ಭ ಬಾಬು ಶೆಟ್ಟಿಯವರು ಎಸ್.ಎಸ್.ಎಲ್.ಸಿ ಕಲಿಯುತ್ತಿರುವ ನಲವತ್ತ್ಮೂರು ಮಕ್ಕಳ ಬಳಿ ತೆರಳಿ ಮಕ್ಕಳಿಗೆ ತಿಳಿಯದ ವಿಷಯಗಳ ಬಗ್ಗೆ ಶಿಕ್ಷಣಾಭ್ಯಾಸ ನೀಡಿದ್ದರು.

ತನ್ನ ಶಾಲೆಯಲ್ಲಿ ಕಡುಬಡವ ವಿದ್ಯಾರ್ಥಿಗಳ ಮನೆಗೂ ಹೋಗಿ ತನ್ನ ಈ ಕಾಯಕ ಮಾಡುತ್ತಿರುವ ಈ ಪುಣ್ಯಾತ್ಮನಿಗೆ ಫೋನ್ ಮಾಡಿ ಅಭಿನಂದಿಸಿದೆ. ಕಳೆದ 23 ವರ್ಷಗಳಿಂದ ತನ್ನ ತರಗತಿಯ ಮಕ್ಕಳು ನೂರಕ್ಕೆ ನೂರು ತೇರ್ಗಡೆಯಾಗುತ್ತಿರುವ ಸಂಗತಿಯನ್ನು ಬಹಳ ಹೆಮ್ಮೆಯಿಂದ, ಆದರೆ ವಿನೀತನಾಗಿ ಹಂಚಿಕೊಂಡರು. ಬಾಬುಶೆಟ್ಟಿ ಯವರಂತಹ ಶಿಕ್ಷಕರೇ ನಮ್ಮ ಶಾಲೆಗಳ ವಿಶ್ವಾಸಾರ್ಹತೆ ಹೆಚ್ಚಿಸುತ್ತಿರುವವರು ಎಂದು ಸುರೇಶ್ ಕುಮಾರ್ ಅವರು ಬಾಬು ಶೆಟ್ಟಿಯವರ ಬಗ್ಗೆ ತಮ್ಮ ಸದ್ಭಾವನೆಯನ್ನು ಹೇಳಿಕೊಂಡಿದ್ದಾರೆ.

ಸುರೇಶ್ ಕುಮಾರ್ ಅವರು ಮಂಗಳವಾರ ಜಿಲ್ಲೆಗೆ ಬಂದ ಸಂದರ್ಭ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಸಿದ್ದತೆಯ ಪರಿಶೀಲನಾ ಸಭೆಯಲ್ಲಿ ಕುಂದಾಪುರ ವಲಯ ಶಿಕ್ಷಣಾಧಿಕಾರಿ ಅಶೋಕ ಕಾಮತ್ ಅವರು ಬಾಬು ಶೆಟ್ಟಿಯವರ ಬಗ್ಗೆ, ಮಕ್ಕಳ ಬಗ್ಗೆ ಅವರ ಕಾಳಜಿ ಬಗ್ಗೆ ಶಿಕ್ಷಣ ಸಚಿವರಿಗೆ ತಿಳಿಸಿದ್ದರು. ಇದರಿಂದ ಪ್ರಭಾವಿತರಾಗಿ ಬಾಬು ಶೆಟ್ಟಿಯವರಿಗೆ ಸುರೇಶ್ ಕುಮಾರ್ ಅವರು ದೂರವಾಣಿ ಕರೆಮಾಡಿ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.

ಪ್ರಾಮಾಣಿಕ ಸೇವೆ ನೀಡಿದವರಿಗೆ ಒಂದು ದಿನ ಗೌರವ ದೊರೆಯುತ್ತದೆ ಎಂಬ ಭರವಸೆ ನನಗಿತ್ತು. ಸಚಿವರ ಫೋನ್ ಕರೆಯಿಂದ ಖುಶಿಯಾಗಿದೆ. ವೃತ್ತಿ ಜೀವನದಲ್ಲಿ ಹಲವು ಪ್ರಶಸ್ತಿ ಸನ್ಮಾನಗಳು ಸಂದಿವೆಯಾದರೂ ಇದು ನನ್ನ ಬದುಕಿನ ಮಹತ್ವದ ಘಟನೆಯಾಗಿದೆ ಎಂದು ಶಿಕ್ಷಕ ಬಾಬು ಶೆಟ್ಟಿಯವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಾಬು ಶೆಟ್ಟಿಯವರ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ‘ನಮ್ಮ ಶಿಕ್ಷಕರು’ ಎಂದು ಅಭಿಮಾನದ ಮಹಾಪೂರ ಹರಿಸುತ್ತಿದ್ದಾರೆ.

Get real time updates directly on you device, subscribe now.